ADVERTISEMENT

ರಾಷ್ಟ್ರಪತಿ ಅಂಕಿತಕ್ಕೆ ‘ದ್ವೇಷ ಭಾಷಣ ತಡೆ’ ಮಸೂದೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:26 IST
Last Updated 5 ಫೆಬ್ರುವರಿ 2026, 15:26 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಬೆಂಗಳೂರು: ಹಲವು ಕಾರಣಗಳನ್ನು ನೀಡಿ, ಅಂಕಿತ ಹಾಕದೆ ರಾಷ್ಟ್ರಪತಿಯ ವಿವೇಚನೆಗೆ ರಾಜ್ಯಪಾಲರು ಕಾಯ್ದಿರಿಸಿದ್ದ ದ್ವೇಷ ಭಾಷಣ ತಡೆ ಮಸೂದೆಯನ್ನು ರಾಷ್ಟ್ರಪತಿಯ ಅಂಕಿತಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ (ನ್ಯಾಯಾಂಗ) ರಾಜ್ಯ ಸರ್ಕಾರವು ಸೋಮವಾರ (ಫೆ. 4) ರವಾನಿಸಿದೆ.

ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ನ್ನು ಸರ್ಕಾರ ರೂಪಿಸಿ, ಅಂಕಿತ ಹಾಕುವಂತೆ ಕೋರಿ ಲೋಕಭವನಕ್ಕೆ ಕಳುಹಿಸಿತ್ತು.

ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದರು.

ADVERTISEMENT

‘ದ್ವೇಷ ಅಪರಾಧಗಳನ್ನು ಸಹಿಸುವುದಿಲ್ಲ’ ಎಂದು 2018ರ ಜುಲೈ 17ರಂದು ಹಾಗೂ ‘ಕೋಮು ದ್ವೇಷ ಹರಡುವ ಅಥವಾ ದ್ವೇಷ ಭಾಷಣದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು 2025ರ ಮೇ 5ರಂದು ಸುಪ್ರೀಂ ಕೋರ್ಟ್‌ ಪ್ರತ್ಯೇಕ ತೀರ್ಪುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ತೀರ್ಪುಗಳನ್ನು ಪರಿಗಣಿಸಿ ಮಸೂದೆಯನ್ನು ರೂಪಿಸಲಾಗಿದೆ. ಹೀಗಾಗಿ, ಅಂಕಿತ ಹಾಕುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.