ADVERTISEMENT

ಪೂರ್ವಾನುಮತಿ ವಿಚಾರ: ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ ಎಂದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 15:39 IST
Last Updated 28 ಅಕ್ಟೋಬರ್ 2025, 15:39 IST

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ಹೈಕೋರ್ಟ್‌ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)

ADVERTISEMENT

ಬೆಂಗಳೂರು: ‘ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರ್ಕಾರದ ಸ್ಥಳ, ಆವರಣ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು’ ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ತಡೆ ನೀಡಿದೆ.

ರಾಜ್ಯ ಸಚಿವ ಸಂಪುಟದ ಈ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ, ‘ಪುನಃಶ್ಚೇತನ ಸೇವಾ ಸಂಸ್ಥೆ’ ಅಧ್ಯಕ್ಷ ವಿನಾಯಕ ಮತ್ತು ‘ವಿ ಕೇರ್ ಫೌಂಡೇಶನ್’ ಅಧ್ಯಕ್ಷ ಗಂಗಾಧರಯ್ಯ, ಧಾರವಾಡದ ರಾಜೀವ ಮಲ್ಹಾರ ಕುಲಕರ್ಣಿ ಹಾಗೂ ಬೆಳಗಾವಿಯ ಉಮಾ ಸತ್ಯಜಿತ್‌ ಚವಾಣ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ಈ ಆದೇಶವು ಸಂವಿಧಾನದ 13(2)ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಈ ಆಕ್ಷೇಪಾರ್ಹ ಆದೇಶದ ಕಾರ್ಯಾಚರಣೆ ಮತ್ತು ಅದರಿಂದ ಈಗಾಗಲೇ ಹೊರಹೊಮ್ಮಿರುವ ಎಲ್ಲಾ ಪರಿಣಾಮಗಳ ಪ್ರಕ್ರಿಯೆಗಳನ್ನು ಮುಂದಿನ ವಿಚಾರಣೆಯವರೆಗೆ ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಿ ಈ ಆದೇಶ ನೀಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿತು.

‘ಆಕ್ಷೇಪಾರ್ಹ ಆದೇಶವು ಸಂವಿಧಾನದ 13(2)ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಈ ಮೂಲಕ 19(1)(ಎ) ಮತ್ತು (ಬಿ) ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕೊಡಮಾಡಲಾಗಿರುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಮೂಲಭೂತ ಹಕ್ಕುಗಳನ್ನು ಕಾರ್ಯಕಾರಿ ಆದೇಶಗಳಿಂದ ಮೊಟಕುಗೊಳಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

‘ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುವ ಬಗ್ಗೆ, ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 31ರಲ್ಲಿ ಈಗಾಗಲೇ ವಿಶೇಷವಾಗಿ ವಿವರಿಸಲಾಗಿದೆ. ಇಂತಹ ಸಂದರ್ಭಗಳ ನಿಯಂತ್ರಣದ ಬಗ್ಗೆ ಕಲಂ 31ರ ಉಪವಿಭಾಗ (6)ರಲ್ಲಿ ಏನೆಲ್ಲಾ ವಿಧಾನಗಳನ್ನು ಅನುಸರಿಬೇಕೆಂಬುದನ್ನು ನಿಖರವಾಗಿ ಸೂಚಿಸಲಾಗಿದೆ. ಇಂತಹುದೊಂದು ಶಾಸನಬದ್ಧ ಕಲಂ ಅಸ್ತಿತ್ವದಲ್ಲಿ ಇರುವಾಗ ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನೋಟಿಸ್‌: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಕಾರ್ಯದರ್ಶಿ, ಡಿಜಿ-ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 17ರ ಮಧ್ಯಾಹ್ನ 2:30ಕ್ಕೆ ನಿಗದಿ ಮಾಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮಲ್ಲಿಕಾರ್ಜುನ ಹಿರೇಮಠ ವಕಾಲತ್ತು ವಹಿಸಿದ್ದಾರೆ.

ಅಶೋಕ ಹಾರನಹಳ್ಳಿ ವಾದಾಂಶ

* ಕರ್ನಾಟಕ ರಾಜ್ಯದಾದ್ಯಂತ ನಾಗರಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳು, ನಡಿಗೆದಾರರ ಸಂಘಗಳು, ಯೋಗ ಕ್ಲಬ್‌ಗಳು ಮತ್ತು ಓಟಗಾರರ ಗುಂಪುಗಳು, ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ನಿಯಮಿತ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಆದರೆ, ಸರ್ಕಾರ ಹೊರಡಿಸಿರುವ ಆದೇಶದ ಅನುಸಾರ ಪೂರ್ವಾನುಮತಿ ಕೊರತೆಯಿಂದಾಗಿ ಕ್ರಿಮಿನಲ್ ಕ್ರಮಕ್ಕೆ ಗುರಿಯಾಗಬಹುದು.

* ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಕೂಡಿದ ಸಂಘ, ಸಂಸ್ಥೆಗಳು, ಅಥವಾ ವ್ಯಕ್ತಿಗಳ ಗುಂಪು ಅಥವಾ ಅವರ ಪರವಾಗಿ ಯಾವುದೇ ಇತರ ವ್ಯಕ್ತಿಯ ಸಂಸ್ಥೆಯು ಈ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ನಡೆಸಿದರೆ, ಅಂತಹುದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್‌) ಕಲಂಗಳ ಪ್ರಕಾರ ಸಭೆ ಸೇರುವುದನ್ನು ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ.

* ಸರ್ಕಾರಿ ಆಸ್ತಿ ಎಂದರೆ: ಸ್ಥಳೀಯ ಪ್ರಾಧಿಕಾರ ಅಥವಾ ಇಲಾಖೆ, ಮಂಡಳಿಗಳು, ಬೆಳೆಗಾರರ ಒಡೆತನದಲ್ಲಿರುವ ಮತ್ತು ನಿರ್ವಹಿಸುವ ಯಾವುದೇ ಭೂಮಿ, ಕಟ್ಟಡ, ರಚನೆ, ರಸ್ತೆ, ಉದ್ಯಾನವನ, ಆಟದ ಮೈದಾನ, ಜಲಮೂಲ ಅಥವಾ ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ನಿಹಿತವಾಗಿರುವ, ವಹಿಸಲಾಗಿರುವ ಅಥವಾ ನಿರ್ವಹಿಸುವ ಯಾವುದೇ ಇತರ ಸ್ಥಿರ ಆಸ್ತಿ.

ಅರ್ಜಿದಾರರ ಪ್ರಶ್ನೆಯ ಮುಖ್ಯಾಂಶಗಳು?

* 16.10.2025: ಖಾಸಗಿ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ‘ಪರಿಹಾರ ಮತ್ತು ನಿಯಂತ್ರಣ’ದ ನಿಟ್ಟಿನಲ್ಲಿ ಸಂಪುಟ ಸಭೆ ಕೈಗೊಂಡ ನಿರ್ಧಾರ.

* ಇದಕ್ಕೆ ಅನುಗುಣವಾಗಿ 18.10.2025ರಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಆದೇಶ.

* 19.10.2025 ಮತ್ತು 20.10.2025ರಂದು ಸಂಪುಟದ ಕೆಲವು ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡರು.

* ಅದರಲ್ಲೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶಾಖೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಜಾಗ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಉಚ್ಚರಿಸಿದರು. ಈ ಮಾತುಗಳು ಅವರು ಯಾರನ್ನು ಉದ್ದೇಶಿಸಿ ಈ ನಿರ್ಧಾರ ಕೈಗೊಂಡರು ಎಂಬುದು ಸ್ಪಷ್ಟವಾಗಿದೆ.

ಅರ್ಜಿದಾರರ ಕೋರಿಕೆ ಏನು?: ಸರ್ಕಾರಿ ಸ್ಥಳಗಳಲ್ಲಿ ಅನುಮತಿಯಿಲ್ಲದ ಮೆರವಣಿಗೆ, ಸಭೆ ನಡೆಸುವುದನ್ನು ನಿರ್ಬಂಧಿಸಿ ಸರ್ಕಾರ ಇದೇ 18ರಂದು ಹೊರಡಿಸಿರುವ ಆದೇಶವು ಸಂವಿಧಾನದ 13, 14 ಮತ್ತು 19ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಆದೇಶವನ್ನು ರದ್ದುಗೊಳಿಸಬೇಕು.

ಸರ್ಕಾರದ ಆದೇಶದಲ್ಲಿ ಏನಿದೆ?

ರಾಜ್ಯದಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳನ್ನು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು, ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು ಇತ್ಯಾದಿಗಳನ್ನು ಸರ್ಕಾರ ಅಥವಾ ಸಂಬಂಧಿತ ಇಲಾಖೆಗೆ ಮುಂಚಿತವಾಗಿ ಅನುಮತಿ ಪಡೆಯದೆ ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟು ಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಆಸ್ತಿ, ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ, ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿರುತ್ತದೆ.

ಸರ್ಕಾರದ ಜಾಗಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮ ವಹಿಸುವುದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಸಾರ್ವಜನಿಕರ ಸಾರ್ವತ್ರಿಕ ಅಸಮಾಧಾನಗಳನ್ನು ನಿವಾರಿಸುವುದು ಸಹ ಅವಶ್ಯವಾಗಿರುತ್ತದೆ.

ಯಾರಿಂದ ಅನುಮತಿ ಪಡೆಯಬೇಕು?

* ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ಸರ್ಕಾರದ ಅಥವಾ ಸರ್ಕಾರಿ ಸ್ವಾಮ್ಯದ ಶಾಲಾ ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ನಡೆಸಬೇಕಾದರೆ ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪಡೆಯಬೇಕು.

* ಉದ್ಯಾನಗಳು, ಆಟದ ಮೈದಾನಗಳು ಇತರೆ ತೆರೆದ ಸ್ಥಳಗಳಲ್ಲಿ ನಡೆಸಬೇಕಾದರೆ ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಿಂದ ಪಡೆಯಬೇಕು.

* ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ, ಸ್ಥಳಗಳಲ್ಲಿ ನಡೆಸುವಾಗ ಆಯಾ ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಪಡೆಯಬೇಕು. ಇಲ್ಲವಾದಲ್ಲಿ ಇದನ್ನು ಬಿಎನ್‌ಎಸ್‌ ಪ್ರಕಾರ ಕಾನೂನು ಬಾಹಿರ ಅಕ್ರಮ ಕೂಟ ಎಂದೇ ಪರಿಗಣಿಸಲಾಗುತ್ತದೆ.

ಅನುಮತಿ ತಪ್ಪಿದರೆ ದಂಡಕ್ಕೆ ಗುರಿ

* ‘ಮೆರವಣಿಗೆ ಅಥವಾ ರ‍್ಯಾಲಿ’ ಎಂದರೆ ಮದುವೆ ಮತ್ತು ಅಂತ್ಯಕ್ರಿಯೆ ಸಭೆಗಳು ಮತ್ತು ಚಳವಳಿಗಳನ್ನು ಹೊರತುಪಡಿಸಿ, ಸಂಗೀತ ಅಥವಾ ಇತರ ರೀತಿಯಲ್ಲಿ, ಸರ್ಕಾರಿ ಆಸ್ತಿಯ ಮೂಲಕ ಹಾದುಹೋಗುವ ಸಾಮಾನ್ಯ ಚಳವಳಿ ಅಥವಾ ಮಾರ್ಗ ಮೆರವಣಿಗೆಯನ್ನು ನಡೆಸಲು ಸಾಮಾನ್ಯ ಉದ್ದೇಶ ಹೊಂದಿರುವ ಅಥವಾ ಯಾವುದೇ ಇತರ ಚಟುವಟಿಕೆಯೊಂದಿಗೆ ಯಾವುದೇ ಹೆಸರಿನಿಂದ ಕರೆಯಲಾಗುವ 10ಕ್ಕೂ ಹೆಚ್ಚು ಜನರ ಸಭೆ.

* ಪೂರ್ವಾನುಮತಿ ಇಲ್ಲದೆ 10ಕ್ಕೂ ಹೆಚ್ಚು ವ್ಯಕ್ತಿಗಳು ಸಭೆ ಸೇರುವುದನ್ನು ಸರ್ಕಾರದ ಹೊಸ ಆದೇಶ ನಿಷೇಧಿಸುತ್ತದೆ. ಅಂತಹ ಸಭೆಯನ್ನು ಕಾನೂನುಬಾಹಿರ ಸಭೆ ಎಂದು ಘೋಷಿಸುತ್ತದೆ. ಇದರಿಂದಾಗಿ ಈ ರೀತಿ ಸಭೆಯಲ್ಲಿ ಭಾಗವಹಿಸುವವರು ಬಿಎನ್‌ಎಸ್‌ ಕಾಯ್ದೆಯ ಅಡಿಯಲ್ಲಿ ದಂಡದ ಪರಿಣಾಮಗಳಿಗೆ ಗುರಿಯಾಗುತ್ತಾರೆ. ಅನುಮತಿ ಉಲ್ಲಂಘಿಸಿ ನಡೆಸುವ ಅಪರಾಧಗಳನ್ನು ತಡೆಗಟ್ಟಲು ಅಥವಾ ವಿಚಾರಣೆಗೆ ಒಳಪಡಿಸಲು ನ್ಯಾಯವ್ಯಾಪ್ತಿಯ ಅನುಸಾರ ಆದೇಶವು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಸರ್ಕಾರದ ಆದೇಶವು ಸಂವಿಧಾನದ ಅಧ್ಯಾಯ IIIರಲ್ಲಿ ಪ್ರತಿಪಾದಿಸಲಾದ ಹಕ್ಕುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ 19(1)(ಎ) ಮತ್ತು (ಬಿ) ಅಡಿಯಲ್ಲಿ ಕೊಡಮಾಡಲಾಗಿರುವ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುತ್ತದೆ.
-ಎಂ.ನಾಗಪ್ರಸನ್ನ, ನ್ಯಾಯಮೂರ್ತಿ
ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಾರ್ವಜನಿಕ ಸ್ಥಳಗಳಲ್ಲಿ ಜನರ ಜಮಾವಣೆಗೆ ಪೊಲೀಸ್ ಇಲಾಖೆ ಪೂರ್ವಾನುಮತಿ ಕಡ್ಡಾಯ ಎನ್ನುವ ಸಂಪುಟ ನಿರ್ಧಾರ ಜಾರಿಗೆ ಹೈಕೋರ್ಟ್ ತಡೆ ನೀಡಿರುವುದು ಸರ್ಕಾರಕ್ಕೆ ಹಿನ್ನಡೆ, ಕುತಂತ್ರ, ಷಡ್ಯಂತ್ರಕ್ಕೆ ತಡೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.