ADVERTISEMENT

ದಳವಾಯಿಯವರೇ ನಿಮ್ಮ ಕಕ್ಷಿದಾರರಿಗೆ ಬುದ್ಧಿ ಹೇಳಿ: ಯತ್ನಾಳ್ ವಕೀಲರಿಗೆ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 15:34 IST
Last Updated 3 ಸೆಪ್ಟೆಂಬರ್ 2025, 15:34 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದಳವಾಯಿಯವರೇ ನಿಮ್ಮ ಕಕ್ಷಿದಾರರಿಗೆ ಬುದ್ಧಿ ಹೇಳಿ, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಬೇಡಿ ಎಂದು. ಎಲ್ಲಾ ಧರ್ಮಗಳಲ್ಲೂ ಒಳ್ಳೆಯ ವಿಚಾರಗಳಿರುತ್ತವೆ. ಸಾಮಾಜಿಕ ಸಹಬಾಳ್ವೆ ಅವಶ್ಯ. ಈ ವಿಷಯವನ್ನು ಅವರಿಗೆ ಮನನ ಮಾಡಿಸಿ...’

‘ನನ್ನ ವಿರುದ್ಧ ಕೊಪ್ಪಳ ಟೌನ್‌ ಪೊಲೀಸ್‌ ಠಾಣೆಯಲ್ಲಿ ದಾಖಾಗಿರುವ ಎಫ್‌ಐಆರ್‌ ರದ್ದುಪಡಿಬೇಕು’ ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಯತ್ನಾಳ್‌ ಪರ ವಕೀಲರಿಗೆ ಸಲಹೆ ನೀಡಿದ ಪರಿ ಇದು.

‘ಭಾರತದಂತಹ ವೈವಿಧ್ಯಮಯ ದೇಶ ಸಿಂಧೂ ನಾಗರಿಕತೆಯಿಂದ ಈತನಕ 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕಲಹ ಮನುಷ್ಯನ ಸಹಜ ಸ್ವಭಾವ. ಒಂದೇ  ಕುಟುಂಬದಲ್ಲಿನ ಸಹೋದರರೇ ಹೊಡೆದಾಡಿಕೊಳ್ಳುತ್ತಾರೆ. ಹೀಗಿರುವಾಗ, ಒಂದು ಸಮುದಾಯ ಮತ್ತೊಂದು ಸಮುದಾಯದ ವಿರುದ್ಧ ಹೋರಾಡುವ ಗುಣ ಹೊಸದೇನಲ್ಲ. ಏನೆಲ್ಲಾ ಅಪಸವ್ಯಗಳಿದ್ದರೂ ಅವುಗಳ ಜತೆಗೇ ಅವರು ಪರಸ್ಪರ ಪ್ರೀತಿಯನ್ನೂ ಹೊಂದಿರುತ್ತಾರೆ. ಜಾತಿ, ಧರ್ಮ, ಸಮುದಾಯಗಳ ಮಧ್ಯೆ ಹಲವು ವಿಚಾರಗಳಿಗೆ ಆಗಾಗ್ಗೆ ಅಡೆತಡೆಗಳು ಉದ್ಭವವಾಗುತ್ತಿರುತ್ತವೆ. ಅವುಗಳನ್ನೆಲ್ಲಾ ನಾವು ತೊಡೆದು ಹಾಕಬೇಕು. ಜನರು ಒಬ್ಬರಿಗೊಬ್ಬರು ಸಹಾಯ ಮಾಡುವ ಗುಣ ಹೊಂದಿರುತ್ತಾರೆ ಎಂಬುದನ್ನು ನಾವು ಯಾವತ್ತೂ ಮರೆಯಬಾರದು’ ಎಂದು ನ್ಯಾಯಪೀಠ ಯತ್ನಾಳ್‌ ಅವರಿಗೆ ಕಿವಿಮಾತು ಹೇಳಿತು.

ADVERTISEMENT

ಇದೇ ವೇಳೆ, ‘ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ ನೀಡುವುದಾಗಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸಬಾರದು’ ಎಂದು ಪ್ರಾಸಿಕ್ಯೂಷನ್‌ಗೆ ಆದೇಶಿಸಿ ಮಧ್ಯಂತರ ಆದೇಶ ನೀಡಿತು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ದೂರುದಾರರಾದ ಖಮರ್‌ ಜುನೈದ್‌ ಖುರೇಷಿ, ಮೈನುದ್ದೀನ್‌ ಬೀಳಗಿ ಹಾಗೂ ಅಬ್ದುಲ್‌ ಕಲಾಂ ಅವರಿಗೆ ತುರ್ತು ನೋಟಿಸ್‌ ಹಾಗೂ ಕೊಪ್ಪಳ ಟೌನ್ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ಕೆಎಸ್‌ಎಟಿ: ನ್ಯಾ.ಪ್ರಭಾಕರ ಶಾಸ್ತ್ರಿ

ನೇಮಕ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ (ಕೆಎಸ್‌ಎಟಿ) ನ್ಯಾಯಾಂಗ ಸದಸ್ಯರನ್ನಾಗಿ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರನ್ನು ನೇಮಕ ಮಾಡಲಾಗಿದೆ. ‘ಈ ನೇಮಕ ಅವರು ಅಧಿಕಾರ ವಹಿಸಿಕೊಳ್ಳುವ ದಿನದಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ’ ಎಂದು ಕೇಂದ್ರ ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ಸಚಿವಾಲಯ 2025ರ ಆಗಸ್ಟ್‌ 29ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ನಿವೃತ್ತಿ ವಯಸ್ಸು 67 ವರ್ಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.