ADVERTISEMENT

ಬಹುಕೋಟಿ ಹಗರಣ| ಕಾನೂನಿಗೆ ಆದ್ಯತೆ–ದಯೆಗೆ ಅಲ್ಲ: ಉದ್ಯಮಿಗೆ ಜಾಮೀನಿಗೆ HC ನಕಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 16:10 IST
Last Updated 15 ಜನವರಿ 2026, 16:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬಂಧನಕ್ಕೆ ಕಾರಣಗಳೇನು ಎಂಬುದನ್ನು ಕಾನೂನು ಅಂಶಗಳನ್ನು ಆಧರಿಸಿ ಪರಿಶೀಲಿಸುವ ಬದಲು ದಯೆಯ ಅಡಿಯಲ್ಲಿ ಮಾತ್ರವೇ ನೋಡುತ್ತಾ ಹೋದರೆ ಅದು ಭೂತದ ಪೆಟ್ಟಿಗೆಯ ಬಾಯಿ ತೆರೆದಂತೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಅರ್ಜಿದಾರರನ್ನು ಕುಟುಕಿದೆ.

ಬಹುಕೋಟಿ ರೂಪಾಯಿಗಳ ನಕಲಿ ಬಿಲ್‌ ಸೃಷ್ಟಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಗರದ ಉದ್ಯಮಿ ಇ.ಪ್ರತಾಪ್‌ ಪತ್ನಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ದಯೆ ಎಂಬುದು ಪ್ರಕರಣದಿಂದ ಪ್ರಕರಣಕ್ಕೆ ಬೇರೆಯಾಗುತ್ತಾ ಹೋಗುತ್ತದೆ. ಆದ್ದರಿಂದ, ಮಧ್ಯಂತರ ಜಾಮೀನು ನೀಡಲಾಗದು’ ಎಂದು ಅರ್ಜಿ ವಜಾಗೊಳಿಸಿದೆ.

ಬಂಧನ ಪ್ರಶ್ನಿಸಿ ಪ್ರತಾಪ್‌ ಪುತ್ರಿ ಇ.ಇಶಿತಾ ಮತ್ತು ಜಾಮೀನು ಕೋರಿ ಪ್ರತಾಪ್‌ ಪತ್ನಿ ಇ.ರೇವತಿ ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ‘ಅರ್ಜಿದಾರರು ಸಂಬಂಧಿಸಿದ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಯಾವುದೇ ವಿಳಂಬ ಮಾಡದೆ ನ್ಯಾಯಾಲಯ ಅದನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸತಕ್ಕದ್ದು’ ಎಂದು ಆದೇಶಿಸಿದ್ದಾರೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ. ಚೌಟ, ‘ಬಂಧನದ ಮೆಮೊ ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ, ಮಾನವೀಯ ಮತ್ತು ದಯೆಯ ನೆಲೆಯಲ್ಲಿ ಜಾಮೀನು ನೀಡಬೇಕು’ ಎಂದು ಕೋರಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ, ‘ಬಹುಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಆರೋಪಿಗಳಾಗಿದ್ದಾರೆ. 2025ರ ಸೆಪ್ಟೆಂಬರ್‌ನಿಂದಲೂ ಅವರಿಗೆ ಹಲವು ಬಾರಿ ನೋಟಿಸ್‌ ನೀಡಲಾಗಿತ್ತಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ, ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಇಬ್ಬರ ವಿರುದ್ಧದ ಆರೋಪಗಳನ್ನು ಬಂಧನದ ಮೆಮೊದಲ್ಲಿ ಸಂಪೂರ್ಣ ವಿವರಿಸಲಾಗಿದೆ’ ಎಂದು ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.