ADVERTISEMENT

ಚಲನಚಿತ್ರ ಅಕಾಡೆಮಿ ವಿರುದ್ಧದ ದೂರು: ಪರಿಗಣಿಸಲು ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 23:38 IST
Last Updated 13 ಫೆಬ್ರುವರಿ 2026, 23:38 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹಣ ದುರುಪಯೋಗ ಮತ್ತು ಬೈ–ಲಾ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ಅಕಾಡೆಮಿ ವಿರುದ್ಧ ನೀಡಲಾಗಿರುವ ಅರ್ಜಿದಾರರ ದೂರನ್ನು ಪರಿಗಣಿಸಿ’ ಎಂದು ಹೈಕೋರ್ಟ್‌, ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಆದೇಶಿಸಿದೆ.

ತುಮಕೂರಿನ, ‘ಮೆಸರ್ಸ್‌ ಸಂವಿಧಾನ ಸಿನಿ ಕಂಬೈನ್ಸ್‌’ ನಿರ್ಮಾಪಕ ಎ.ವಿ.ನಾಗರಾಜು (ಟೈಗರ್ ನಾಗ) ಮತ್ತು ಆನೇಕಲ್‌ನ ಎ.ಆರ್‌.ಪ್ರೊಡಕ್ಷನ್ಸ್‌ನ ನಿರ್ಮಾಪಕ ಅರುಣ್‌ ರೈ ತೋಡರ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅಕಾಡೆಮಿಯ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಸಲ್ಲಿಸಲು ಮತ್ತು ಕನ್ನಡ ಚಲನಚಿತ್ರ ಅಕಾಡೆಮಿಯ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅರ್ಜಿದಾರರು 2025ರ ಆಗಸ್ಟ್‌ 18ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಎತ್ತಿರುವ ದೂರುಗಳನ್ನು ಪರಿಶೀಲಿಸಿ’ ಎಂದು ನ್ಯಾಯಪೀಠ ಪ್ರತಿವಾದಿ ಸಹಕಾರ ಸಂಘಗಳ ಉಪನಿಬಂಧಕರಿಗೆ ನಿರ್ದೇಶಿಸಿದೆ.

ADVERTISEMENT

‘ಅರ್ಜಿದಾರರು, 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2026ರ ಜನವರಿ 29ರಿಂದ 2026ರ ಫೆಬ್ರುವರಿ 6ರವರೆಗೆ ನಡೆಸುವುದಕ್ಕೂ ಮುನ್ನ ರಾಜ್ಯ ಸರ್ಕಾರ ಹೊಸ ಆಯ್ಕೆ ಸಮಿತಿ ರಚಿಸಬೇಕು ಎಂದು ಕೋರಿದ ಅಂಶವೂ ಅರ್ಜಿಯಲ್ಲಿ ಅಡಕವಾಗಿದೆ. ಆದರೆ, ಚಲನಚಿತ್ರೋತ್ಸವ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಅಂಶದ ಬಗ್ಗೆ ಗಮನಹರಿಸುವುದು ಈಗ ವ್ಯರ್ಥ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿಯಲ್ಲಿ, ಕನ್ನಡ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆ ಕಾರ್ಯದರ್ಶಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹಾಗೂ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಜಿ.ಆರ್‌.ಮೋಹನ್‌ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.