ಬೈಕ್ ಸೇವೆ
Credit: iStock Photo
ಬೆಂಗಳೂರು: ‘ಮೋಟಾರು ವಾಹನ ಕಾಯ್ದೆ–1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರ‍್ಯಾಪಿಡೊ ತಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಆರು ವಾರಗಳ ಒಳಗಾಗಿ ನಿರ್ಬಂಧಿಸಬೇಕು’ ಎಂದು ಹೈಕೋರ್ಟ್ ಆದೇಶ ನೀಡಿದೆ.
‘ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವ ಅನುಮತಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ, ‘ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್’, ‘ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೆಟ್ ಲಿಮಿಟೆಡ್’ ಮತ್ತು ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್’ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.
‘ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮಗಳನ್ನು ರೂಪಿಸಲು ಮತ್ತು ಸಾರಿಗೆಯೇತರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು. ಹೀಗಾಗಿ, ಈ ಕುರಿತು ಮಾರ್ಗದರ್ಶಿ ಸೂತ್ರಗಳು ಜಾರಿಯಾಗುವ ತನಕ ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಓಲಾ, ಉಬರ್ ಮತ್ತಿತರ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
‘ಬೈಕ್ ಟ್ಯಾಕ್ಸಿ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದಂತೆ 2022ರ ಫೆಬ್ರುವರಿ 19ರಂದು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ನೀಡಿರುವ ಮನವಿಯನ್ನು ಪರಿಗಣಿಸಲು ಮತ್ತು ಸಾರಿಗೆ ವಾಹನಗಳಾಗಿ ಪರವಾನಗಿಯ ನೋಂದಣಿ ಕೋರುವ ಮೋಟಾರ್ ಬೈಕ್‌ಗಳಿಗೆ ಅನುಮತಿ ನೀಡಲು ಸಾರಿಗೆ ಆಯುಕ್ತರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.