ಬೆಂಗಳೂರು: ‘ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಬಿತ್ತರಿಸಿದ ಯೂ–ಟ್ಯೂಬರ್ ಎಂ.ಡಿ.ಸಮೀರ್ ಅವರಿಗೆ ಬಳ್ಳಾರಿ ಪೊಲೀಸರು ಠಾಣೆಗೆ ಹಾಜರಾಗಲು ನೋಟಿಸ್ ನೀಡುವ ಮುನ್ನ ಕಾನೂನು ಪ್ರಕ್ರಿಯೆಯಲ್ಲಿ ಎಡವಿದ್ದಾರೆ’ ಎಂದು ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್, ನೋಟಿಸ್‌ಗೆ ಮಧ್ಯಂತರ ತಡೆ ನೀಡಿದೆ.
ಪೊಲೀಸ್ ನೋಟಿಸ್ ಪ್ರಶ್ನಿಸಿ ಎಂ.ಡಿ.ಸಮೀರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ತುರ್ತು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಮೀರ್ ಪರ ಸುಪ್ರೀಂ ಕೋರ್ಟ್ ವಕೀಲ ಎ.ವೇಲನ್ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿ, ‘ಸಮೀರ್ ಯೂ–ಟ್ಯೂಬರ್ ಆಗಿದ್ದು, ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ವಿಡಿಯೊ ಅಪ್‌ಲೋಡ್ ಮಾಡಿದ್ದರು. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
‘ದೂರಿನ ಅನ್ವಯ ಬಳ್ಳಾರಿಯ ಪೊಲೀಸರು ಇದೇ 5ರ ರಾತ್ರಿ ನೋಟಿಸ್ ಜಾರಿಗೊಳಿಸಿ, ಗುರುವಾರ (ಮಾ.6) ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ರಾತ್ರೋರಾತ್ರಿ ಬೆಂಗಳೂರಿನ ವಕೀಲರ ಕಚೇರಿಗೆ ನುಗ್ಗಿ ಸಮೀರ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ವಕೀಲರ ಮಧ್ಯಪ್ರವೇಶದಿಂದ ಅದು ತಪ್ಪಿದೆ. ಕೌಲ್ ಬಜಾರ್ ಠಾಣೆಯ ಪೊಲೀಸರು ನೀಡಿರುವ ಈ ನೋಟಿಸ್ ಸಕಾರಣ ಹೊಂದಿಲ್ಲ. ಏಕಪಕ್ಷೀಯ ಮತ್ತು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದ್ದು, ಇದಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲರು, ‘ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮೀರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಎಫ್‌ಐಆರ್ ಪ್ರತಿ ಪಡೆದುಕೊಂಡು, ಅದರಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಪರಿಶೀಲಿಸಲಾಗುವುದು. ವಿಚಾರಣೆಗೆ ಹಾಜರಾಗಲು ಸಕಾರಣವನ್ನು ಒಳಗೊಂಡ ಸಮಯವನ್ನು ನೀಡಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದು ಧರ್ಮಸ್ಥಳದ ಪ್ರಕರಣವೇ’ ಎಂದು ಪ್ರಶ್ನಿಸಿತಲ್ಲದೇ, ‘ನೋಟಿಸ್‌ನೊಂದಿಗೆ ಲಗತ್ತಿಸಿರುವ ಎಫ್‌ಐಆರ್ ಎಲ್ಲಿದೆ? ಇದೇ ನ್ಯಾಯಪೀಠದ ಆದೇಶವನ್ನು ಆಧರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ನೀವು ನೋಡಿಲ್ಲವೇ? ಸುತ್ತೋಲೆಗೆ ವಿರುದ್ಧವಾಗಿ ತನಿಖಾಧಿಕಾರಿ ಹೇಗೆ ನಡೆದುಕೊಳ್ಳುತ್ತಾರೆ? ಬಿಎನ್‌ಎಸ್ ಕಾಯ್ದೆಯ ಅಡಿಯಲ್ಲಿ ಯಾರನ್ನಾದರೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೆ ಎಫ್‌ಐಆರ್ ಅನ್ನು ಅದರ ಜೊತೆಗೆ ಲಗತ್ತಿಸಬೇಕಲ್ಲವೇ’ ಎಂದು ಕಿಡಿ ಕಾರಿತು.
ಪ್ರತಿವಾದಿ ಬಳ್ಳಾರಿ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಸಮೀರ್ ಪರ ಸುಪ್ರೀಂ ಕೋರ್ಟ್ ವಕೀಲ ಪವನ್ ಶ್ಯಾಮ್ ವಕಾಲತ್ತು ವಹಿಸಿದ್ದಾರೆ.
‘ಪ್ರಭಾವಿಗಳ ಬಿಂಬಿಸಿರುವುದಕ್ಕೆ ನೋಟಿಸ್ ನೀಡಿದ್ದಾ’
‘ಇದರಲ್ಲಿ ಅಂಥ ತುರ್ತು ಏನಿತ್ತು? ವಿಡಿಯೊದಲ್ಲಿ ಪ್ರಭಾವಿಗಳನ್ನು ಬಿಂಬಿಸಲಾಗಿದೆ ಎಂದು ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೀರಾ’ ಎಂದು ತನಿಖಾಧಿಕಾರಿಯನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು. ‘ನೋಟಿಸ್ ಜೊತೆಗೆ ಎಫ್ಐಆರ್ ಪ್ರತಿ ನೀಡುವುದು ಕಡ್ಡಾಯವಲ್ಲವೇ? ನಿಮಗೆ ಏನಾದರೂ ಒತ್ತಡವಿತ್ತೇ? ನೋಟಿಸ್ ಕೊಡುವುದಕ್ಕೆ ರಾತ್ರಿ ಹೊತ್ತೆ ಹೋಗಬೇಕಿತ್ತಾ? ಸುತ್ತೋಲೆ ಪಾಲನೆ ಮಾಡದೆಯೇ ನೋಟಿಸ್ ಕೊಟ್ಟಿದ್ದೇಕೆ’ ಎಂದು ಪ್ರಾಸಿಕ್ಯೂಷನ್ ಪ್ರಶ್ನಿಸಿ ನೋಟಿಸ್‌ಗೆ ಮಧ್ಯಂತರ ತಡೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.