ADVERTISEMENT

42,345 ಮನೆಗಳ ಹಂಚಿಕೆ ಇಂದು: ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭಾಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ನಿರ್ಮಿಸಲಾದ ಮನೆಗಳು
ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ನಿರ್ಮಿಸಲಾದ ಮನೆಗಳು   

ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿ ವಿಶೇಷ ಅನುದಾನದಡಿ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿರುವ ಒಟ್ಟು 42,345 ಮನೆಗಳ ಲೋಕಾರ್ಪಣೆ ಮತ್ತು ಹಕ್ಕುಪತ್ರಗಳ ವಿತರಣಾ ಸಮಾರಂಭ ಇಲ್ಲಿನ ಮಂಟೂರು ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು, ಶಾಸಕರು ಮತ್ತು ಪ್ರಮುಖರು ಸಮಾರಂಭದಲ್ಲಿ ಭಾಗವಹಿಸುವರು’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡ ಜಿಲ್ಲೆಯಲ್ಲಿ 2,169 ಮನೆಗಳು, ಬೆಂಗಳೂರಿನಲ್ಲಿ 5,731 ಮನೆಗಳು ಸೇರಿ ರಾಜ್ಯದ ವಿವಿಧೆಡೆ ಒಟ್ಟು 42,345 ಮನೆಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ವರ್ಚ್ಯುಯಲ್ ಮೂಲಕ ಮುಖ್ಯಮಂತ್ರಿಯವರು ಲೋಕಾರ್ಪಣೆ ಮಾಡುವರು. ಡಿಸಿಎಂ ಅವರು ಮನೆಗಳ ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿತರಿಸುವರು’ ಎಂದು ಹೇಳಿದರು.

ADVERTISEMENT

‘ರಾಜ್ಯದ ವಿವಿಧೆಡೆಯಿಂದ ಅಂದಾಜು 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಅವ್ಯವಸ್ಥೆ ಆಗದಂತೆ ನಿಭಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಊಟದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆಂದೇ 6 ಕಡೆ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಮಾತನಾಡಿ, ‘ಕೊಳೆಗೇರಿ ನಿವಾಸಿಗಳ ಬಹು ದಿನಗಳ ಕನಸು ಈಡೇರಲಿದೆ. ಎಲ್ಲರೂ ನೆಮ್ಮದಿಯಿಂದ ಸುಭದ್ರವಾದ ಸೂರಿನಲ್ಲಿ ನೆಲೆಸಲು ಸಾಧ್ಯವಾಗಲಿದೆ’ ಎಂದರು.

ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ನಿರ್ಮಿಸಲಾದ ಮನೆಗಳು
ಮನೆಗಳ ಹಂಚಿಕೆ ಬಡಜನರ ಸಮಾರಂಭವಾಗಿದೆ. ಇದು ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ. ಸಿದ್ದರಾಮಯ್ಯ ಅವರು ಎತ್ತರಕ್ಕೆ ಬೆಳೆದಿದ್ದು ಅವರಿಗೆ ಶಕ್ತಿ ಪ್ರದರ್ಶನದ ಅಗತ್ಯವಿಲ್ಲ.
-ಜಮೀರ್ ಅಹಮದ್ ಖಾನ್, ವಸತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.