
ಸುವರ್ಣ ವಿಧಾನಸೌಧ(ಬೆಳಗಾವಿ): ‘ಸರ್ಕಾರಿ ಶಾಲೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವುದಿಲ್ಲ. ಅಲ್ಲದೇ, ಗಡಿಭಾಗದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿ ಶಾಲೆಗಳನ್ನು ನಡೆಸುತ್ತೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಬಿಜೆಪಿಯ ಹರೀಶ್ ಪೂಂಜ, ಶರಣು ಸಲಗರ, ಜೆಡಿಎಸ್‌ನ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರ ಪ್ರತ್ಯೇಕ ಪ್ರಶ್ನೆಗಳಿಗೆ ಸಚಿರು ಉತ್ತರಿಸಿದರು.
ಗಡಿ ಭಾಗದಲ್ಲಿ ಯಾವುದೇ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿದ್ದರೆ ಶಿಕ್ಷಕರನ್ನು ನೇಮಿಸಲಾಗುವುದು ಮತ್ತು ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು. ಮರಾಠಿ ಮಾಧ್ಯಮ ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಲು ಹಿಂದೇಟು ಹಾಕುವುದಿಲ್ಲ. ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 1,78,935 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 1,33,345 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 45,590 ಹುದ್ದೆಗಳು ಖಾಲಿ ಇವೆ. ಅದೇ ರೀತಿ 5,024 ಸರ್ಕಾರಿ ಪ್ರೌಢಶಾಲೆಗಳಿಗೆ ಮಂಜೂರಾಗಿದ್ದ 44,144 ಹುದ್ದೆಗಳ ಪೈಕಿ 32,590 ಭರ್ತಿಯಾಗಿದೆ. 12,134 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಾಲೆಗಳಿಗೆ 40 ಸಾವಿರ ಹಾಗೂ ಪ್ರೌಢಶಾಲೆಗಳಿಗೆ 11 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಲ್ಲದೇ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಗ್ರೂಪ್ ಡಿ ಸೇರಿ ಒಟ್ಟು 10,629 ಹುದ್ದೆಗಳು ಮಂಜೂರಾಗಿದ್ದು, 3,721 ಹುದ್ದೆಗಳು ಖಾಲಿ ಇವೆ. ವರ್ಗಾವಣೆ, ಬಡ್ತಿ, ನೇರ ನೇಮಕಾತಿ ಹಾಗೂ ಅನುಕಂಪ ಆಧಾರಿತ ನೇಮಕಗಳ ಮೂಲಕ ಇವುಗಳನ್ನು ಸರಿದೂಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಹರೀಶ್ ಪೂಂಜ, ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ಖರೀದಿಸಲು ಸರ್ಕಾರ ಪ್ರತಿ ಮೊಟ್ಟೆಗೆ ₹5 ನೀಡುತ್ತಿದೆ. ಆದರೆ, ಮಾರುಕಟ್ಟೆ ದರ ₹ 6.50 ಇದೆ. ಪ್ರತಿ ಮೊಟ್ಟೆಗೆ ₹1.50 ಹಾಗೂ ಬಾಳೆ ಹಣ್ಣಿಗೆ ಶಿಕ್ಷಕರೇ ಹಣ ಪಾವತಿಸುವ ಸ್ಥಿತಿ ಇದೆ ಎಂದು ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಈ ಸಮಸ್ಯೆ ಬಗೆಹರಿಸಲು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಪ್ರಯತ್ನಿಸಲಾಗುವುದು ಎಂದೂ ಭರವಸೆ ನೀಡಿದರು.
‘ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಕ್ರಮ’
ಸರ್ಕಾರಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ 20 ಸಾವಿರಕ್ಕೂ ಹೆಚ್ಚು ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಅದೇ ಅಧಿಸೂಚನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಶಶೀಲ್ ನಮೋಶಿ ಅವರ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ‘ಈಗಾಗಲೇ ಕಲ್ಯಾಣ ಕರ್ನಾಟಕಕ್ಕೆ ಸುಮಾರು 5,000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಳಮೀಸಲಾತಿ ಜಾರಿಗಾಗಿ ಪ್ರಕ್ರಿಯೆ ವಿಳಂಬವಾಗಿತ್ತು. ಕಲ್ಯಾಣ ಕರ್ನಾಕದ ನೇಮಕಾತಿಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಲಾಗುವುದು’ ಎಂದರು.
‘ಎರಡು ದಶಕಗಳಿಂದ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡದ ಕಾರಣ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ, ದೈಹಿಕ ಶಿಕ್ಷಣ ಪಾಠಗಳ ಬೋಧನೆಗೆ ಅಡ್ಡಿಯಾಗಿದೆ. ಪದವಿ ಪಡೆದವರು ಕೆಲಸವಿಲ್ಲದೆ ನಿರುದ್ಯೋಗಿ ಗಳಾಗಿದ್ದಾರೆ. ಶಿಕ್ಷಕರ ನೇಮಕಾತಿ ವೇಳೆ ಅಗತ್ಯವಿರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ನಮೋಶಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.