ADVERTISEMENT

ಕಲಿಕಾ ಸಾಮರ್ಥ್ಯ ವಿಸ್ತಾರಕ್ಕೆ ತಜ್ಞರ ಬಳಕೆ: ಸಚಿವ ಮಧು ಬಂಗಾರಪ್ಪ

‘ಸ್ಕ್ರೈಬ್‌’ ಬಳಕೆ ಪರಿಹಾರವಲ್ಲ...

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:36 IST
Last Updated 6 ಮಾರ್ಚ್ 2025, 15:36 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ನಿಧಾನಗತಿಯ ಕಲಿಕಾ ಸಾಮರ್ಥ್ಯ ಹೊಂದಿರುವ ಮಕ್ಕಳ ಜ್ಞಾನದ ಅರಿವಿನ ವಿಸ್ತಾರ ಹಾಗೂ ಪರೀಕ್ಷೆ ಬರೆಯುವ ಸಾಮರ್ಥ್ಯ ಉನ್ನತೀಕರಿಸಲು ತಜ್ಞರ ಜತೆ ಸಮಾಲೋಚಿಸಿ, ಇನ್ನಷ್ಟು ಸುಧಾರಣಾ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

‘ನಿಧಾನಗತಿಯ ಕಲಿಕಾ ಸಾಮರ್ಥ್ಯದ ಮಕ್ಕಳು ಇತರ ಮಕ್ಕಳಂತೆ ನಿಗದಿತ ಸಮಯದ ಒಳಗೆ ಪರೀಕ್ಷೆ ಬರೆಯಲು ಸಾಧ್ಯವಾಗದೆ ಅನುತ್ತೀರ್ಣರಾಗುತ್ತಿದ್ದಾರೆ. ಹಾಗಾಗಿ, ಅವರಿಗೆ ಪರೀಕ್ಷೆ ಬರೆಯಲು ಸಹಾಯಕರನ್ನು (ಸ್ಕ್ರೈಬ್‌) ಬಳಸಿಕೊಳ್ಳುವ ಅವಕಾಶ ನೀಡಬೇಕು’ ಎಂಬ ಬಿಜೆಪಿಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ವಿಧಾನಪರಿಷತ್‌ನಲ್ಲಿ ಉತ್ತರ ನೀಡಿದ ಅವರು, ಅಂತಹ ಮಕ್ಕಳಿಗೆ ಸ್ಕ್ರೈಬ್‌ ಪರಿಹಾರವಲ್ಲ, ಈ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ ಎಂದರು.

ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಉನ್ನತೀಕರಣಕ್ಕೆ ಇಲಾಖೆ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಂಪ್ಯೂಟರ್‌ ಸೌಲಭ್ಯ ಹೊಂದಿರುವ 5 ಸಾವಿರ ಶಾಲೆಗಳಲ್ಲಿನ ಮಕ್ಕಳಿಗೆ ಕೃತಕ ಬುದ್ದಿಮತ್ತೆ, ತಂತ್ರಜ್ಞಾನ ಬಳಸಿಕೊಂಡು ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಸಲಾಗುತ್ತಿದೆ. ಅದಕ್ಕಾಗಿ ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಓದು ಕರ್ನಾಟಕ ಕಾರ್ಯಕ್ರಮದ ಅಡಿ 42 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ADVERTISEMENT

‘ಕೆಲ ಜಿಲ್ಲೆಗಳಲ್ಲಿ 2024ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶೇ 25ಕ್ಕಿಂತ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಅವರಲ್ಲಿ ಶೇ 5ರಿಂದ 15ರಷ್ಟು ಮಕ್ಕಳು ನಿಧಾನ ಕಲಿಕೆಯ ಸಾಮರ್ಥ್ಯ ಉಳ್ಳವರು ಎನ್ನುವುದು ಸಮೀಕ್ಷೆಗಳಿಂದ ದೃಢಪಟ್ಟಿದೆ. ಈ ಕುರಿತು ಸಮೀಕ್ಷೆ ನಡೆಸಬೇಕು. ನ್ಯೂನತೆ ಇರುವ ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಬೇಕು. ಅಂಥವರನ್ನು ಪ್ರತ್ಯೇಕಿಸಿ, ಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡಬೇಕು’ ಎಂದು ಧನಂಜಯ ಸರ್ಜಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.