ಬಸವರಾಜ ಹೊರಟ್ಟಿ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ಕಡೆಯ ದಿನವಾದ ಶುಕ್ರವಾರ ವಿಧಾನ ಪರಿಷತ್ತು ಸತತ 12 ತಾಸಿನ ಕಲಾಪಕ್ಕೆ ಸಾಕ್ಷಿಯಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಡುವು ನೀಡದೆ ಕಲಾಪ ನಡೆಸಿದರು.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಲಾಪ ಆರಂಭವಾಯಿತು. ಕಲಾಪ ಪಟ್ಟಿಯಲ್ಲಿ ಇದ್ದ ಪ್ರಶ್ನೋತ್ತರ, ತಡೆಹಿಡಿಯಲಾದ ಪ್ರಶ್ನೆಗಳನ್ನು ತ್ವರಿತವಾಗಿ ಮುಗಿಸಿದ ಸಭಾಪತಿ ಅವರು ಬೆಳಿಗ್ಗೆ 11.15ರ ವೇಳೆಗೆ, ‘ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಪ್ರತಿಬಂಧಕ ಮಸೂದೆ–2025’ ಅನ್ನು ಸದನದ ಪರ್ಯಾವಲೋಚನೆಗೆ ಹಾಕಿದರು.
ಈ ಒಂದು ಮಸೂದೆಯ ಮೇಲೆಯೇ 15 ಸದಸ್ಯರು ಮಾತನಾಡಿದರು. ಸಂಜೆ 6ವರೆಗೂ ಚರ್ಚೆ ನಡೆಯಿತು. ಮಸೂದೆ ಕುರಿತಾಗಿ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ಎತ್ತುತ್ತಿದ್ದಾಗ, ಆಡಳಿತ ಪಕ್ಷದ ಸದಸ್ಯರು ಎದ್ದುನಿಂತು ಅಡ್ಡಿಪಡಿಸಿದರು. ಎಲ್ಲರು ಮಾತನಾಡುವಾಗಲೂ ಎದ್ದು ನಿಲ್ಲುತ್ತಿದ್ದ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರನ್ನು ಗದರಿಸಿ ಕೂರಿಸಿದ ಬಸವರಾಜ ಹೊರಟ್ಟಿ ಅವರು ಕಲಾಪ ಸುಗಮವಾಗಿ ನಡೆಯುವಂತೆ ಮಾಡುತ್ತಿದ್ದರು.
ಬಿಜೆಪಿಯ ಸಿ.ಟಿ.ರವಿ ಅವರು ಚರ್ಚೆಯ ವೇಳೆ, ‘ಈ ಸದನಕ್ಕೆ ನಾನೂ ಶಾಶ್ವತ ಅಲ್ಲ, ನೀವೂ ಶಾಶ್ವತ ಅಲ್ಲ’ ಎಂದು ಸಭಾಪತಿ ಅವರನ್ನು ಉದ್ದೇಶಿಸಿ ಹೇಳಿದರು. ಈ ಮಾತಿಗೆ ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟಿತು. ಸಭಾಪತಿ ಸೂಚನೆ ಬಳಿಕ ಗದ್ದಲ ತಹಬಂದಿಗೆ ಬಂತು.
ಮಧ್ಯಾಹ್ನ 2ರ ಹೊತ್ತಿಗೆ ಸದಸ್ಯರಲ್ಲಿ ಕೆಲವರು ಊಟಕ್ಕೆ ಬಿಡುವಂತೆ ಮನವಿ ಮಾಡಿದರು. ‘ಎಲ್ಲರೂ ಗದ್ದಲ ಮಾಡುತ್ತಿರುವ ಕಾರಣಕ್ಕೆ ಈ ಮಸೂದೆ ಮೇಲಿನ ಚರ್ಚೆ ಮುಗಿಯುವವರೆಗೂ ಊಟಕ್ಕೆ ಬಿಡುವುದಿಲ್ಲ’ ಎಂದು ಹೊರಟ್ಟಿ ಅವರು ಚರ್ಚೆಯನ್ನು ಮುಂದುವರೆಸಿದರು.
ಈ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ವೇಳೆಗೆ ಅತ್ತ ವಿಧಾನಸಭೆಯ ಅಧಿವೇಶನ ಮುಗಿಯಿತು. ಅಲ್ಲಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸತತ ಮೂರು ತಾಸು ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷತ್ತಿಗೆ ಬಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದಸ್ಯರು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ ಸಿದ್ದರಾಮಯ್ಯ ಅವರು ಸುಮಾರು 6.30ರಿಂದ 9.40ರವರೆಗೂ ಸುದೀರ್ಘವಾಗಿ ಮಾತನಾಡಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೈಗೊಂಡಿದ್ದ ನಿರ್ಣಯಗಳನ್ನು ಮಂಡಿಸಿದರು. ಈ ನಿರ್ಣಯಗಳಿಗೆ ಅಂಗೀಕಾರ ಪಡೆದು, ಅಧಿವೇಶನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡುವಷ್ಟರಲ್ಲಿ ರಾತ್ರಿ 10 ಕಳೆದಿತ್ತು.
ಹಿರಿಯರ ಉಪಸ್ಥಿತಿ: ವಿಧಾನಸಭೆಯ ಮುಂದೂಡಿಕೆಯಾದ ಮೇಲೆ, ಸಿದ್ದರಾಮಯ್ಯ ಅವರು ಪರಿಷತ್ತಿಗೆ ಬಂದರು. ದ್ವೇಷ ಭಾಷಣ ಮಸೂದೆಯ ಮೇಲಿನ ಚರ್ಚೆ ನಡೆಯುತ್ತಲೇ ಇತ್ತು. ಮೂರು ಗಂಟೆ ಕಾದು ಕುಳಿತ ಅವರು, ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಮೂರು ಗಂಟೆ ಉತ್ತರ ನೀಡಿದರು.
ಈ ವೇಳೆ, ಸರಿಸುಮಾರು 78 ದಾಟುತ್ತಿರುವ ಸಭಾಪತಿ ಹೊರಟ್ಟಿ, ಸಿದ್ದರಾಮಯ್ಯ, ಸಭಾನಾಯಕ ಎಸ್.ಎನ್. ಬೋಸರಾಜು, 70 ದಾಟಿರುವ ಸಚಿವರಾದ ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ ಸದನದಲ್ಲಿದ್ದರು. ಆದರೆ, ಕಿರಿಯರ ಸಂಖ್ಯೆ ಒಟ್ಟು ಸಂಖ್ಯೆ 15 ಅನ್ನೂ ದಾಟುತ್ತಿರಲಿಲ್ಲ.
ವಿರೋಧ ಪಕ್ಷದ ಸಾಲಿನಲ್ಲಿ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಸಚೇತಕ ಎನ್. ರವಿಕುಮಾರ್ ಸೇರಿ ಕೆಲವರಷ್ಟೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.