ADVERTISEMENT

ಆರಂಭದಲ್ಲಿ ಕಲಾಪ ಆಲಾಪ: ಅಂತ್ಯದಲ್ಲಿ ಕಲಹ

ಗುಡುಗದ ಬಿ.ಎಸ್. ಯಡಿಯೂರಪ್ಪ

ವೈ.ಗ.ಜಗದೀಶ್‌
Published 21 ಡಿಸೆಂಬರ್ 2018, 19:33 IST
Last Updated 21 ಡಿಸೆಂಬರ್ 2018, 19:33 IST
   

ಬೆಳಗಾವಿ: ಭಾರಿ ಕೋಲಾಹಲ, ಕಾಂಗ್ರೆಸ್ ಭಿನ್ನಮತ ಭುಗಿಲು, ಮೈತ್ರಿ ಸರ್ಕಾರದ ಕಂಪನಕ್ಕೆ ಚಳಿಗಾಲದ ಅಧಿವೇಶನ ವೇದಿಕೆಯಾಗಲಿದೆ ಎಂಬೆಲ್ಲ ರಾಜಕೀಯ ತರ್ಕಗಳು ಹುಸಿಗೊಂಡಿದ್ದು, ಉತ್ತರ ದಿಕ್ಕಿನ ಸಮಸ್ಯೆಗಳ ಚರ್ಚೆಗೆ ಅವಕಾಶವೇ ಸಿಗಲಿಲ್ಲವೆಂಬ ಕೋಪದ ಮಧ್ಯೆಯೇ ‘ಯಶಸ್ವಿ’ಯಾಗಿ ಕೊನೆಗೊಂಡಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸಾವಧಾನ, ಗುಡುಗದೇ ಇದ್ದ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅನುಪಸ್ಥಿತಿ, ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರ್ಭಟ, ಸಭಾಪತಿ–ಉಪಸಭಾಪತಿ ಹುದ್ದೆಗಳಿಗೆ ಅನಿರೀಕ್ಷಿತ ಅಭ್ಯರ್ಥಿಗಳ ಆಯ್ಕೆ ಈ ಬಾರಿಯ ವೈಶಿಷ್ಟ್ಯ.

‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬುದು ಬಿಜೆಪಿಯವರ ನಂಬುಗೆ. ‘ಮುಂದಿನ 10 ದಿನ ಸರ್ಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲುವಂತೆ ಮಾಡುತ್ತೇನೆ. ಸರ್ಕಾರ ಪತನವಾಗುವವರೆಗೂ ಹೋರಾಟ ಮುಂದುವರಿಸಲು ಅಧಿವೇಶನ ಆರಂಭಿಕ ಹೆಜ್ಜೆ’ ಎಂದು ಅಧಿವೇಶನದ ಮೊದಲ ದಿನ ಯಡಿಯೂರಪ್ಪ ಅಬ್ಬರಿಸಿದ್ದರು. 2013ರಲ್ಲಿ ಕೆಜೆಪಿಯಆರು ಸದಸ್ಯರ ನಾಯಕರಾಗಿದ್ದ ಅವರು, ಈ ಬಾರಿ ಬಿಜೆಪಿಯ 104 ಸದಸ್ಯರ ಬಲದೊಂದಿಗೆ ಮೊದಲಿನ ಉಗ್ರಾವ
ತಾರ ಪ್ರದರ್ಶಿಸಲಿದ್ದಾರೆ ಎಂಬುದು ಆ ಪಕ್ಷದ ಸದಸ್ಯರ ಭರವಸೆಯಾಗಿತ್ತು.

ADVERTISEMENT

ಅಧಿವೇಶನ ಮುಗಿಯಲು ಒಂದು ದಿನ ಬಾಕಿ ಇದ್ದಾಗಲಷ್ಟೇ ಯಡಿಯೂರಪ್ಪ ಗುಡುಗಲು ಆರಂಭಿಸಿದರು. ಸರ್ಕಾರದ ವಿರುದ್ಧ ಅನಗತ್ಯವಾಗಿ ಮೇಲೆ ಬಿದ್ದು, ಉತ್ತರದ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂಬ ‘ಶಾಪ’ಕ್ಕೆ ಗುರಿಯಾಗಬಾರದು ಎಂಬ ಕಾರಣಕ್ಕೆ ಅವರು ಮೌನಮುನಿಯಾದರು ಎಂದು ಹೇಳಲಾಗುತ್ತಿದೆ.

‘ನಮ್ಮ ನಾಯಕ ಹಿಂದೆ ಎಂದೂ ಇಷ್ಟು ಸಪ್ಪೆಯಾಗಿ ಇದ್ದಿದ್ದಿಲ್ಲ. ಯಡಿಯೂರಪ್ಪನವರು ಯಾಕೆ ಹೀಗಾದರು’ ಎಂದು ಅವರ ಪಕ್ಷದ ಆರಗ ಜ್ಞಾನೇಂದ್ರ ಹೇಳಿದ ಮೇಲಷ್ಟೇ, ಯಡಿಯೂರಪ್ಪ ಕದನಕ್ಕೆ ಇಳಿದರು.

ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಆರಂಭದ ದಿನದಿಂದಲೂ ಆರ್ಭಟಿಸುತ್ತಲೇ ಬಂದರು. ದಿನಕ್ಕೊಂದು ವಿಷಯ ಮುಂದಿಟ್ಟು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

ಎಚ್‌ಡಿಕೆ ಸಾವಧಾನ:ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಣಿಯಾಗಿಯೇ ಬಂದಿದ್ದ ಎಚ್‌.ಡಿ. ಕುಮಾರಸ್ವಾಮಿ, ಕಲಾಪದ ಉದ್ದಕ್ಕೂ ಸಾವಧಾನದಿಂದ ನಡೆದುಕೊಂಡರು. ಬರದ ಮೇಲಿನ ಚರ್ಚೆಗೆ ಉತ್ತರ ಕೊಡುವಾಗಲಷ್ಟೇ ಯಡಿಯೂರಪ್ಪ ಅವರನ್ನು ಕೆಣಕಿ, ಪ್ರಚೋದಿಸಿ ಕದನಕ್ಕೆ ಆಹ್ವಾನ ನೀಡಿದರು. ಅಲ್ಲಿಯವರೆಗಿನ ಸಹನೆ ಮರೆತು ಕಲಹಕ್ಕೆ ದಾರಿ ಮಾಡಿಕೊಟ್ಟರು.

ಅದು ಬಿಟ್ಟರೆ, ಎರಡೂ ಸದನಗಳಲ್ಲಿ ಆಡಳಿತ–ವಿರೋಧ ಪಕ್ಷದ ಸದಸ್ಯರನ್ನು ಸಂಭಾಳಿಸಿಕೊಂಡು ಅಧಿವೇಶನ ನಡೆಸಿದರು. ಆಪರೇಷನ್ ಕಮಲದ ಭೀತಿ, ಕಾಂಗ್ರೆಸ್ ಸದಸ್ಯರ ಭಿನ್ನಮತ ಸ್ಫೋಟದ ಆತಂಕದ ಮಧ್ಯೆಯೇ ಕಲಾಪ ಸುಗಮವಾಗಿ ನಡೆಯಲು ಬೇಕಾದ ಚಾಣಾಕ್ಷತೆ ತೋರಿದರು.

ವಿರೋಧ ಪಕ್ಷದ ಸದಸ್ಯರು ಸರ್ಕಾರದ ವೈಫಲ್ಯ ಎತ್ತಿಹಿಡಿದು ಮುಗಿಬಿದ್ದಾಗ, ಕಾಂಗ್ರೆಸ್ ಸದಸ್ಯರು ಭಿನ್ನಭೇದ ಮರೆತು ಮುಖ್ಯಮಂತ್ರಿ ಬೆಂಬಲಕ್ಕೆ ನಿಂತಿದ್ದುದು ಈ ಬಾರಿಯ ವಿಶೇಷವೂ ಹೌದು.

ಹಿಂದಿನ ಐದು ವರ್ಷಗಳಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೇಂದ್ರವಾಗಿರುತ್ತಿದ್ದರು. ಈ ಬಾರಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಕಾರಣಕ್ಕೆ, ಆ ಮಾದರಿ ಮತ್ತೊಂದು ಬಗೆಯಲ್ಲಿ ಪುನರಾವರ್ತನೆಯಾಗಬಹುದು, ಶಕ್ತಿಕೇಂದ್ರದ ಸುತ್ತ ಶಾಸಕರು ಗಿರಕಿಹೊಡೆಯಬಹುದು ಎಂಬ ಅಂದಾಜಿತ್ತು. ಅವರು ವಿದೇಶಕ್ಕೆ ಹೋಗುವ ಮೂಲಕ ಎಲ್ಲವೂ ತಣ್ಣಗಾಯಿತು.ಕಲಾಪದ ಬಹುತೇಕ ಸಮಯ ಬರಗಾಲದ ಚರ್ಚೆಗೆ ಸೀಮಿತವಾಯಿತು. ಉತ್ತರ ಭಾಗದ ಸಮಸ್ಯೆಗಳ ಚರ್ಚೆಗೆ ಕೊನೆಗೂ ಅವಕಾಶವೇ ಸಿಗಲಿಲ್ಲ.

‘ಉತ್ತರ’ ಇಲ್ಲ;‘ಬರ’ವೇ ಪೂರ:ಕಲಾಪದ ಬಹುತೇಕ ಸಮಯ ಬರಗಾಲದ ಚರ್ಚೆಗೆ ಸೀಮಿತವಾಯಿತು. ಉತ್ತರ ಭಾಗದ ಸಮಸ್ಯೆಗಳ ಚರ್ಚೆಗೆ ಕೊನೆಗೂ ಅವಕಾಶವೇ ಸಿಗಲಿಲ್ಲ.

ಬರಗಾಲ ಎಲ್ಲ ಶಾಸಕರಿಗೂ ಇಷ್ಟದ ವಿಷಯವಾಗಿರುವುದರಿಂದ ಅದರ ಮೇಲೆ ಚರ್ಚೆಗೆ ವಿಪುಲ ಅವಕಾಶ ಕೊಟ್ಟರೆ, ಬೇರೆ ವಿಷಯಗಳ ಪ್ರಸ್ತಾಪ, ಗದ್ದಲಗಳಿಂದ ಬಚಾವಾಗಬಹುದು ಎಂಬ ಸರ್ಕಾರದ ಚಿಂತನೆಯೂ ಇದರ ಹಿಂದೆ ಇದ್ದಿರಬಹುದು.

ಏಕೆಂದರೆ ಇದೇ ಮೊದಲ ಬಾರಿಗೆ ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸೇರಿ ಐವರು ಸಚಿವರು ಉತ್ತರ ನೀಡಿ ದಾಖಲೆ ನಿರ್ಮಿಸಿದ್ದೂ ಇದಕ್ಕೆ ಸಾಕ್ಷಿಯಂತಿದೆ.

ಇಲ್ಲಿ ಅಧಿವೇಶನ ನಡೆವಾಗ ಉತ್ತರ ಕರ್ನಾಟಕದ ಚರ್ಚೆಗೆ ಕನಿಷ್ಠ 2 ದಿನ ಮೀಸಲಿಡುವುದು ಸಾಮಾನ್ಯ. ಈ ಬಾರಿ ಅವಕಾಶ ಸಿಗಲೇ ಇಲ್ಲ ಎಂಬುದು ಶಾಸಕರ ಸಿಟ್ಟು.

ಆದರೆ, ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 9 ಕಚೇರಿಗಳನ್ನು ಈ ಭಾಗಕ್ಕೆ ಸ್ಥಳಾಂತರ ಮಾಡುವ ಪ್ರಮುಖ ನಿರ್ಣಯ ಕೈಗೊಂಡಿದ್ದು ಮಾತ್ರ ಸಾಧನೆ.

ಸಭಾಪತಿಯಾಗಿ ಕೆ.ಪ್ರತಾಪಚಂದ್ರ ಶೆಟ್ಟಿ, ಉಪಸಭಾಪತಿಯಾಗಿ ಎಸ್.ಎಲ್. ಧರ್ಮೇಗೌಡ ಅವರು ಆಯ್ಕೆಯಾಗುತ್ತಾರೆ ಎಂಬುದು ಅವರಿಗೇ ಗೊತ್ತಿರಲಿಲ್ಲ. ಶಾಸಕರಿಗಂತೂ ಅರಿವೇ ಇರಲಿಲ್ಲ. ಅಂತಹ ಅನಿರೀಕ್ಷಿತ ಆಯ್ಕೆಗೂ ಈ ಬಾರಿಯ ಅಧಿವೇಶನ ಸಾಕ್ಷಿಯಾಯಿತು.

ಮನವಿಗೆ ಕಿವಿ: ಹೋರಾಟಗಾರರಿಗೆ ಸವಿ

ಬೆಳಗಾವಿ ಅಧಿವೇಶನವೆಂದರೆ ಪ್ರತಿಭಟನೆಗಳ ಕಾವು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ, ಆಕ್ರೋಶಗಳ ಸದ್ದೇ ಸುದ್ದಿಯಾಗುತ್ತಿದ್ದುದು ಕೆಲವು ವರ್ಷಗಳಿಂದ ನಡೆದುಬಂದಿರುವ ಪರಿಪಾಠ.

ಇಲ್ಲಿ ಅಧಿವೇಶನ ನಡೆಸುವ ಪರಂಪರೆಗೆ ನಾಂದಿ ಹಾಡಿದ ಎಚ್‌.ಡಿ. ಕುಮಾರಸ್ವಾಮಿ, ಬಳಿಕ ನಡೆದ ಅಧಿವೇಶನದ ವೇಳೆ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಭಟನೆಗಳ ನೇತೃತ್ವ ವಹಿಸಿದ್ದೂ ಉಂಟು. ಹೋರಾಟಗಳ ಹಿಂದಿನ ಮರ್ಮವನ್ನು ಅರಿತಿದ್ದ ಅವರು, ಈ ಬಾರಿ ಮುನ್ನೆಚ್ಚರಿಕೆ ವಹಿಸಿದ್ದರು. ಹೋರಾಟಗಾರರಿಗೆ ತಮ್ಮ ಕೂಗನ್ನು ಮುಖ್ಯಮಂತ್ರಿ ಆಲಿಸಬೇಕು ಎಂಬ ಸಣ್ಣಾಸೆ ಇರುತ್ತದೆ ಎಂಬುದನ್ನು ಅರಿತಿದ್ದ ಅವರು, ಇದಕ್ಕೆ ಕಿವಿಗೊಟ್ಟರು. ಪ್ರತಿ ದಿನ ಏನಿಲ್ಲವೆಂದರೂ ಏಳೆಂಟು ಸಂಘಟನೆಗಳ ಪದಾಧಿಕಾರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಕರೆಯಿಸಿಕೊಂಡು ಅಹವಾಲು ಆಲಿಸಿದರು. ಹೋರಾಟಗಾರರನ್ನು ‘ಸಮಾಧಾನ’ಪಡಿಸಿದರು. ಮುಖ್ಯಮಂತ್ರಿಯೇ ಬರಬೇಕು ಎಂದು ಹಟ ಹಿಡಿದವರ ಬಳಿಗೆ ತಮ್ಮ ರಾಯಭಾರಿಯಂತಿರುವ ಬಂಡೆಪ್ಪ ಕಾಶೆಂಪೂರ ಅವರನ್ನು ಕಳುಹಿಸಿ, ಅವರನ್ನೂ ‘ತೃಪ್ತಿ’ ಪಡಿಸುವ ಜಾಣ್ಮೆ ಪ್ರದರ್ಶಿಸಿದರು. ಹೀಗಾಗಿ ಯಾವುದೇ ಹೋರಾಟವೂ ವಿಕೋಪಕ್ಕೆ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.