ADVERTISEMENT

ಟೋಲ್‌ ಸೇರಿಸಿಯೇ ಬಾಡಿಗೆ ವಸೂಲಿ: ಲಾರಿ ಮಾಲೀಕರು, ಏಜೆಂಟರ ಒಕ್ಕೂಟ ನಿರ್ಧಾರ

ಬಾಲಕೃಷ್ಣ ‍ಪಿ.ಎಚ್‌.
Published 11 ಮಾರ್ಚ್ 2023, 19:30 IST
Last Updated 11 ಮಾರ್ಚ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಲಾರಿ ಬಾಡಿಗೆ ಜತೆಗೆ ಟೋಲ್‌ ಹಣವನ್ನೂ ವಸೂಲಿ ಮಾಡಲು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ನಿರ್ಧರಿಸಿದೆ. ಮೊದಲ ಹಂತವಾಗಿ ಬೆಂಗಳೂರು–ಮೈಸೂರು ಮಾರ್ಗದಲ್ಲಿ ಬಾಡಿಗೆ ಜೊತೆಗೆ ಟೋಲ್‌ ಹಣವನ್ನೂ ಪಡೆಯಲು ತೀರ್ಮಾನಿಸಿದೆ.

ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಿದ್ದರೆ ಲಾರಿಗೆ ₹ 1,000 ಟೋಲ್‌ ಪಾವತಿಸಬೇಕು. ಡೀಸೆಲ್‌ ಬೆಲೆ ಹೆಚ್ಚಾಗಿರುವುದರಿಂದ ನಷ್ಟ ಅನುಭವಿಸುತ್ತಿರುವ ಲಾರಿ ಮಾಲೀಕರಿಗೆ ಇದು ಮತ್ತಷ್ಟು ಹೊರೆಯಾಗಿದೆ. ಹೀಗಾಗಿ ಲಾರಿಯನ್ನು ಬಾಡಿಗೆ ಪಡೆಯುವವರಿಂದಲೇ ಟೋಲ್‌ ಹಣವನ್ನೂ ವಸೂಲಿ ಮಾಡುವುದು ಅನಿವಾರ್ಯವಾಯಿತು ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಬಗ್ಗೆ ಬೆಂಗಳೂರು, ಮೈಸೂರು ವರ್ತಕರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಅವರಿಗೆ ಈ ಬಗ್ಗೆ ಮನವಿಯನ್ನೂ ನೀಡಿದ್ದೇವೆ. ಮುಂದೆ ರಾಜ್ಯದ ಎಲ್ಲ ಕಡೆಗಳಲ್ಲಿ ವರ್ತಕ ಸಂಘಗಳ ಜತೆಗೆ ಮಾತನಾಡಿ ಇದೇ ನಿಯಮವನ್ನು ಪಾಲಿಸುತ್ತೇವೆ’ ಎಂದು ವಿವರಿಸಿದರು.

ADVERTISEMENT

‘ರೈತ ವಿರೋಧಿ ಕಾಯ್ದೆಯನ್ನು ರದ್ದುಪಡಿಸಲು ರೈತರು ವರ್ಷಕ್ಕೂ ಹೆಚ್ಚು ಸಮಯ ದೆಹಲಿಯಲ್ಲಿ ಕುಳಿತುಕೊಳ್ಳಬೇಕಾಯಿತು. ಜಡ್ಡುಗಟ್ಟಿದ ಸರ್ಕಾರಗಳಿಗೆ ನಮ್ಮ ಕೂಗು ಮುಟ್ಟಬೇಕಿದ್ದರೆ ಅದೇ ರೀತಿಯ ಹೋರಾಟ ಮಾಡಬೇಕು. ಬ್ಯಾಂಕಿನ ಸಾಲದ ಕಂತು, ತೆರಿಗೆ ಕಟ್ಟಬೇಕಿದ್ದರೆ ನಾವು ದುಡಿಯುತ್ತಲೇ ಇರಬೇಕು. ಹೀಗಾಗಿ ಆ ರೀತಿಯ ಹೋರಾಟ ನಮ್ಮಿಂದ ಸಾಧ್ಯವಿಲ್ಲ. ಟೋಲ್‌ ಹಣ ದುಪ್ಪಟ್ಟಾಗಿರುವುದನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆಯನ್ನಷ್ಟೇ ಮುಂದೆ ನಡೆಸುತ್ತೇವೆ. ಲಾರಿಗಳನ್ನು ಬಾಡಿಗೆ ಪಡೆದುಕೊಳ್ಳುವವರಿಂದಲೇ ಟೋಲ್‌ ಹಣ ತೆಗೆದುಕೊಳ್ಳುತ್ತೇವೆ’ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಪ್ರತಿಕ್ರಿಯಿಸಿದರು.

‘ರೆಟ್ರೊ ರಿಫ್ಲೆಕ್ಟಿವ್‌ ಟೇಪ್‌ ಬೇಡ’
‘ವಾಣಿಜ್ಯ ವಾಹನಗಳಿಗೆ ರಾಜ್ಯ ಸರ್ಕಾರವು ರೆಟ್ರೊ ರಿಫ್ಲೆಕ್ಟಿವ್‌ ಟೇಪ್‌ ಕ್ಯುಆರ್‌ ಕೋಡ್‌ ಅಳವಡಿಸುವುದನ್ನು ಕಡ್ಡಾಯ ಮಾಡಿದೆ. ದೇಶದಲ್ಲಿ ಬೇರೆಲ್ಲೂ ಇಲ್ಲದ ನಿಯಮ ಇಲ್ಲಿ ಏಕೆ ಬೇಕು? ನಿತ್ಯ 40 ಸಾವಿರ ಲಾರಿಗಳು ಕರ್ನಾಟಕಕ್ಕೆ ಬಂದು ಹೋಗುತ್ತವೆ. ಅವರಿಗೆ ಇಲ್ಲದ ರೆಟ್ರೊ ರಿಫ್ಲೆಕ್ಟಿವ್‌ ಟೇಪ್‌ ಕ್ಯುಆರ್‌ ಕೋಡ್‌ ರಾಜ್ಯದ ಲಾರಿಗಳಿಗಷ್ಟೇ ಏಕೆ ಬೇಕು? ಈ ನಿಯಮವನ್ನು ರದ್ದು ಮಾಡಬೇಕು’ ಎಂದು ಜಿ.ಆರ್‌. ಷಣ್ಮುಖಪ್ಪ ಆಗ್ರಹಿಸಿದರು.

‘ರೆಟ್ರೊ ರಿಫ್ಲೆಕ್ಟಿವ್‌ ಟೇಪ್‌ ಕ್ಯುಆರ್ ಕೋಡ್‌’ಗೆ ನಿಗದಿತ ಕಂಪನಿಗಳು ಯಾವುದೇ ಜಿಎಸ್‌ಟಿ ಸಹಿತ ಬಿಲ್‌ ನೀಡುತ್ತಿಲ್ಲ. ಇದು ವಾರ್ಷಿಕ ₹ 500 ಕೋಟಿ ಹಗರಣವಾಗಲಿದೆ’ ಎಂದು ಸೈಯದ್‌ ಸೈಫುಲ್ಲಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.