ADVERTISEMENT

ವಿಪಕ್ಷ ಶಾಸಕರಿಗೆ ತಲಾ ₹ 25 ಕೋಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ಯಡಿ ಸಿ.ಎಂ. ಅನುದಾನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 15:34 IST
Last Updated 16 ಸೆಪ್ಟೆಂಬರ್ 2025, 15:34 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಸ್ವಪಕ್ಷೀಯ ಶಾಸಕರಿಗೆ ‘ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ಯಡಿ ಈಗಾಗಲೇ ತಲಾ ₹ 50 ಕೋಟಿ ಅನುದಾನ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ತಲಾ‌ ₹ 25 ಕೋಟಿ ಅನುದಾನ ನೀಡಲು ನಿರ್ಧರಿಸಿದ್ದಾರೆ.

ಅನುದಾನ ಹಂಚಿಕೆ ಸಂಬಂಧ ವಿರೋಧ ಪಕ್ಷಗಳ ಶಾಸಕರಿಗೆ ಸಿದ್ದರಾಮಯ್ಯ ಅವರು ಈ ಬಗ್ಗೆ ಸೆ. 15ರಂದು ಪತ್ರ ಬರೆದಿದ್ದಾರೆ.

ADVERTISEMENT

‘2025-26ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ₹ 25 ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಅದರ ಅನ್ವಯ ಕಾಮಗಾರಿವಾರು ಅನುದಾನದ ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿದ್ದು, ಇಲಾಖಾವಾರು ಕಾಮಗಾರಿಗಳ ವಿವರಗಳನ್ನು ಮುಂದಿನ ಕ್ರಮಕ್ಕಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಬೇಕು’ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಡಿ ಬರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಪ್ರದೇಶದ ಕಾಮಗಾರಿಗಳಿಗೆ ₹ 18.75 ಕೋಟಿ ಅನುದಾನ ನೀಡಲಾಗುವುದು. ವಿವೇಚನಾ ಅಧಿಕಾರದಡಿ ವಿಧಾನಸಭಾ ಸದಸ್ಯರು ಆಯ್ಕೆ ಮಾಡಬಹುದಾದ ಇತರೆ ಇಲಾಖೆಯ ಕಾಮಗಾರಿಗಳಿಗೆ ₹ 6.25 ಕೋಟಿ ವೆಚ್ಚ ಮಾಡಬಹುದು ಪತ್ರದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ, ‘ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ‌ ಅನುದಾನ ನೀಡಲಾಗುತ್ತಿದೆ’ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತಮಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದರು. ಆಗ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ, ‘ಅನುದಾನ ಕೊಡುತ್ತೇನೆ. ಇಷ್ಟೇ ಕೊಡುತ್ತೇನೆ ಎಂದು ಹೇಳಲು ಆಗದು. ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಶಾಸಕರಿಗೆ ಅನುದಾನ ಕೊಡುತ್ತೇನೆ’ ಎಂದು ಭರವಸೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.