ADVERTISEMENT

ವಿಧಾನ ಪರಿಷತ್: ಬಿಜೆಪಿಗೆ ಬಹುಮತ | ದಕ್ಷಿಣ ಪದವೀಧರ ಕ್ಷೇತ್ರ: ಕಾಂಗ್ರೆಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 20:18 IST
Last Updated 16 ಜೂನ್ 2022, 20:18 IST
   

ಬೆಂಗಳೂರು: ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಗುರುವಾರ ಘೋಷಣೆಯಾಗಿದ್ದು, ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡಿವೆ. ಜೆಡಿಎಸ್‌ ಶೂನ್ಯ ಸಂಪಾದನೆ ಮಾಡಿದೆ.

ಇದರಿಂದಾಗಿ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಬಲ 39ಕ್ಕೇರಿದೆ. ಒಂಬತ್ತು ವರ್ಷಗಳ ಬಳಿಕ ಬಿಜೆಪಿ ಮತ್ತೆ ಬಹುಮತ ಸಾಧಿಸಿದೆ. ಬಹುಮತ ಇಲ್ಲದ ಕಾರಣ ಮತಾಂತರ ನಿಷೇಧ ಮಸೂದೆಯಂತಹ ವಿವಾದಾತ್ಮಕ ಮಸೂದೆಗಳಿಗೆ ಅನುಮೋದನೆ ಪಡೆಯಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ.

ADVERTISEMENT

ಚುನಾವಣೆ ನಡೆದ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳ ಫಲಿತಾಂಶ ಬುಧವಾರವೇ ಪ್ರಕಟವಾಗಿತ್ತು. ಬಿಜೆಪಿಯ ಬಸವರಾಜ ಹೊರಟ್ಟಿ, ಹಣಮಂತ ನಿರಾಣಿ ಮತ್ತು ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಜಯ
ಗಳಿಸಿದ್ದರು. ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟ ಪ್ರಕ್ರಿಯೆ ಸುಮಾರು 29 ತಾಸು ಹಿಡಿಯಿತು.

ಕಾಂಗ್ರೆಸ್‌ಗೆ ಗೆಲುವು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ 12,205 ಮತ
ಗಳ ಅಂತರದಿಂದ ಗೆಲುವು ಸಾಧಿಸಿದರು.

ಬಿಜೆಪಿಯ ಮೈ.ವಿ.ರವಿಶಂಕರ್‌ 33,878 ಮತಗಳನ್ನು ಗಳಿಸಿದರು. ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ 17 ಅಭ್ಯರ್ಥಿಗಳನ್ನು ಕೈಬಿಡಲಾಯಿತು. ಮಧು ಅವರು 46,083 ಮತಗಳನ್ನು ಪಡೆದರು. ಆದರೆ ನಿಗದಿತ ಕೋಟ ತಲುಪಲು 808 ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಸ್ಪರ್ಧಿ ಮೈ.ವಿ.ರವಿಶಂಕರ್‌ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಿದರು. ಕೋಟ ತಲುಪುತ್ತಿದ್ದಂತೆಯೇ ಎಣಿಕೆ ಕಾರ್ಯ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು.

ಬುಧವಾರ ಬೆಳಿಗ್ಗೆ 8ಕ್ಕೆ ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆ ಗುರುವಾರ ಮಧ್ಯಾಹ್ನ 1 ರ ಸುಮಾರಿಗೆ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.