ADVERTISEMENT

ಇಂದು ವಿಧಾನ ಪರಿಷತ್‌ ಚುನಾವಣೆ: ಕಣದಲ್ಲಿ 90 ಅಭ್ಯರ್ಥಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2021, 21:15 IST
Last Updated 9 ಡಿಸೆಂಬರ್ 2021, 21:15 IST
ವಿಧಾನ ಪರಿಷತ್‌ ಚುನಾವಣೆಯ ಅಂಗವಾಗಿ ಗುರುವಾರ ಮಂಗಳೂರಿನ ತಾಲೂಕು ಪಂಚಾಯತ್‌ನಲ್ಲಿರುವ ಮಷ್ಟರಿಂಗ್‌ ಸೆಂಟರ್‌ನಿಂದ ಮತಪೆಟ್ಟಿಗೆ ಹಿಡಿದುಕೊಂಡು ಮತಗಟ್ಟೆಗೆ ತೆರಳಿದ ಸಿಬ್ಬಂದಿಗಳು –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ ಚುನಾವಣೆಯ ಅಂಗವಾಗಿ ಗುರುವಾರ ಮಂಗಳೂರಿನ ತಾಲೂಕು ಪಂಚಾಯತ್‌ನಲ್ಲಿರುವ ಮಷ್ಟರಿಂಗ್‌ ಸೆಂಟರ್‌ನಿಂದ ಮತಪೆಟ್ಟಿಗೆ ಹಿಡಿದುಕೊಂಡು ಮತಗಟ್ಟೆಗೆ ತೆರಳಿದ ಸಿಬ್ಬಂದಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಪ್ಪತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಾಳೆ (ಶುಕ್ರವಾರ) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು, ಡಿಸೆಂಬರ್‌ 14ರಂದು ಫಲಿತಾಂಶ ಹೊರ ಬರಲಿದೆ.

ಬುಧವಾರ ಸಂಜೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗುರುವಾರ ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುವ ಕೊನೆಯ ಕ್ಷಣದ ಕಸರತ್ತು ನಡೆಯಿತು.

ನವೆಂಬರ್‌ 16ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಪೈಪೋಟಿಯಲ್ಲಿವೆ. ಜೆಡಿಎಸ್‌ ಆರು ಕ್ಷೇತ್ರಗಳಲ್ಲಿ ಹಾಗೂ 33 ಪಕ್ಷೇತರರು ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಒಬ್ಬ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ.

ADVERTISEMENT

ರಾಜ್ಯದಲ್ಲಿ 6,072 ಮತಗಟ್ಟೆಗಳಿದ್ದು, 23,065 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು ಸೇರಿದಂತೆ ಪ್ರಭಾವಿ ರಾಜಕಾರಣಿಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆಗಳನ್ನು ನಡೆಸಿದ್ದ ನಾಯಕರು, ಸ್ಥಳೀಯ ಸಂಸ್ಥೆಗಳ ಸದಸ್ಯರ ಮತ ಸೆಳೆಯಲು ಪ್ರಯತ್ನ ಮಾಡಿದ್ದಾರೆ. ಬುಧವಾರ ಸಂಜೆ ಬಹಿರಂಗ ಪ್ರಚಾರ ಕೊನೆಗೊಳ್ಳುವವರೆಗೂ ಎಡೆಬಿಡದೆ ಪ್ರಚಾರ ಸಭೆಗಳನ್ನು ನಡೆಸಿದ ವಿವಿಧ ಪಕ್ಷಗಳ ಮುಖಂಡರು, ಮತ ಬುಟ್ಟಿಯನ್ನು ಭದ್ರ ಪಡಿಸಿಕೊಳ್ಳಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.