ADVERTISEMENT

ಶಾಲಾ ಬಾಲಕಿಯರಿಗೆ ಉಚಿತ ಬೈಸಿಕಲ್‌: ಯೋಜನೆ ಮರುಜಾರಿಗೆ ಯೋಜನಾ ಆಯೋಗ ಶಿಫಾರಸು

ಯೋಜನೆ ಮರುಜಾರಿಗೆ ನೀತಿ ಮತ್ತು ಯೋಜನಾ ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:16 IST
Last Updated 19 ಫೆಬ್ರುವರಿ 2026, 16:16 IST
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಬಿ.ಆರ್‌.ಪಾಟೀಲ ಅವರು  ಸಿದ್ದರಾಮಯ್ಯ ಅವರಿಗೆ ವರದಿಯನ್ನು ಗುರುವಾರ ಸಲ್ಲಿಸಿದರು. ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ.ಸುಧಾಕರ್‌ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಬಿ.ಆರ್‌.ಪಾಟೀಲ ಅವರು  ಸಿದ್ದರಾಮಯ್ಯ ಅವರಿಗೆ ವರದಿಯನ್ನು ಗುರುವಾರ ಸಲ್ಲಿಸಿದರು. ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ.ಸುಧಾಕರ್‌ ಉಪಸ್ಥಿತರಿದ್ದರು.   

ಬೆಂಗಳೂರು: ಸರ್ಕಾರಿ ಶಾಲಾ ಬಾಲಕಿಯರಿಗೆ ಬೈಸಿಕಲ್‌ ಉಚಿತ ವಿತರಣಾ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಶಿಫಾರಸು ಮಾಡಿದೆ. 

ಆಯೋಗದ ಅಧ್ಯಕ್ಷ ಬಿ.ಆರ್‌.ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಿದೆ. ಮಾಧ್ಯಮಿಕ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ ತಗ್ಗಿಸಲು, ಗ್ರಾಮೀಣ ಬಾಲಕಿಯರ ಶಿಕ್ಷಣದ ಮುಂದುವರಿಕೆಯ ಆಶಯದ ಭಾಗವಾಗಿ ಬೈಸಿಕಲ್‌ಗಳ ಉಚಿತ ವಿತರಣೆಯ ಅಗತ್ಯವಿದೆ ಎಂದು ಹೇಳಲಾಗಿದೆ. 

ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ವಿಶೇಷ ಅನುದಾನ ಮೀಸಲಿಡಬೇಕು. ಮುಂದಿನ ಮೂರು ವರ್ಷಗಳಲ್ಲಿ ಅನುಸರಣೆ ಪ್ರಮಾಣವನ್ನು ಕನಿಷ್ಠ ಶೇ 50ಕ್ಕೆ ಹೆಚ್ಚಿಸಬೇಕು. ರಾಜ್ಯ ಸಲಹಾ ಮಂಡಳಿಯನ್ನು ರಚಿಸಿ ಅನುಷ್ಠಾನದ ಮೇಲ್ವಿಚಾರಣೆ ನಡೆಸಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳನ್ನು ಬಲಪಡಿಸಬೇಕು. ರಚನೆ ಹಾಗೂ ಕಾರ್ಯವಿಧಾನದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ADVERTISEMENT

ರಾಜ್ಯವು ಶಿಕ್ಷಣದಲ್ಲಿ ಡಿಜಿಟಲ್‌ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಕೆಗೆ ಸಮಗ್ರ ನೀತಿ ರೂಪಿಸಲು ಉನ್ನತಾಧಿಕಾರ ಸಮಿತಿಯನ್ನು ರಚಿಸಬೇಕು. ಎಲ್ಲಾ ಪ್ರಮುಖ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆ, ಸಾರ್ವಜನಿಕ ಶಿಕ್ಷಣದ ಮೇಲ್ವಿಚಾರಣೆ ಹಾಗೂ ಸುಧಾರಣೆಗಾಗಿ ಸರ್ಕಾರಿ ಶಾಲಾ ಅಭಿವೃದ್ಧಿ ಪ್ರಾಧಿಕಾರ (ಜಿಎಸ್‌ಡಿಎ) ಸ್ಥಾಪಿಸಬೇಕು ಎಂದು ಆಯೋಗ ಹೇಳಿದೆ.

ಯುಜಿಸಿ, ಎಐಸಿಟಿಇ ಮುಂತಾದ ಕೇಂದ್ರ ಸಂಸ್ಥೆಗಳಿಂದ ಸಂಶೋಧನಾ ಅನುದಾನದಲ್ಲಿ ಭಾರಿ ಕಡಿತವಾಗಿದೆ. ಇದರಿಂದ ಸಂಶೋಧನೆ, ಪೇಟೆಂಟ್‌ ಚಟುವಟಿಕೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಹಿನ್ನಡೆಯಾಗಿದೆ. ಇಂತಹ ಬೆಳವಣಿಗೆಗಳ ಮೇಲೆ ನಿಗಾವಹಿಸಲು ಕರ್ನಾಟಕ ರಾಜ್ಯ ಸಂಶೋಧನಾ ಅನುದಾನ ಪ್ರತಿಷ್ಠಾನ (ಕೆಎಸ್‌ಆರ್‌ಜಿಎಫ್‌) ಸ್ಥಾಪನೆ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ.

ಹಸಿರು ವಲಯ ವಿಸ್ತರಣೆ

ರಾಜ್ಯವು ಹವಾಮಾನ ಬದಲಾವಣೆಯನ್ನು ಎದುರಿಸಲು ನವೀಕೃತ ಹಾಗೂ ವೈಜ್ಞಾನಿಕ ಆಧಾರದ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ನಗರ ಪ್ರದೇಶಗಳಲ್ಲಿ ಹಸಿರು ವಲಯ ವಿಸ್ತರಣೆ ಮಾಡಬೇಕು. ಪ್ರವಾಹ, ಭೂಕುಸಿತ, ಬರ ಮುಂತಾದ ಪ್ರಕೃತಿ ವಿಕೋಪಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ವ್ಯವಸ್ಥೆಯನ್ನು ಬಲಪಡಿಸಬೇಕು. ಶಾಲಾ ಮತ್ತು ಉನ್ನತ ಶಿಕ್ಷಣ ಪಠ್ಯಕ್ರಮಗಳಲ್ಲಿ ಹವಾಮಾನ ಬದಲಾವಣೆ ಕುರಿತ ಅಧ್ಯಯನವನ್ನು ಒಳಗೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಆರೋಗ್ಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳಿದ್ದು, ಅಗತ್ಯ ಅನುದಾನವನ್ನೂ ನೀಡಲಾಗಿದೆ. ಹಾಗಾಗಿ, ಹೊಸ ಯೋಜನೆ ರೂಪಿಸುವ ಬದಲು ಇರುವ ಯೋಜನೆಗಳ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಬೇಕು. ಶಾಲಾ ಬಾಲಕಿಯರಿಗೆ ಶುಚಿತ್ವದ ಪ್ಯಾಡ್‌ಗಳನ್ನು ವಿತರಿಸುವ ಕಾರ್ಯವನ್ನು ಮುಂದುವರಿಸಬೇಕು ಎಂದು ವರದಿ ಹೇಳಿದೆ. 

ಆರ್‌ಟಿಇ: ಪಿಯುವರೆಗೆ ವಿಸ್ತರಣೆ

ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ದ್ವಿತೀಯ ಪಿಯುವರೆಗೂ ವಿಸ್ತರಿಸಬೇಕು. ಪರಿಣಾಮಕಾರಿ ಅನುಷ್ಠಾನಕ್ಕೆ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ರಾಜ್ಯ ಯೋಜನಾ ಆಯೋಗ ಹೇಳಿದೆ. ಪ್ರಸ್ತುತ ಕಾಯ್ದೆಯು 6ರಿಂದ 14 ವರ್ಷದ ಮಕ್ಕಳಿಗೆ ಅನ್ವಯಿಸುತ್ತದೆ. ಕಾಯ್ದೆಗೆ ತಿದ್ದುಪಡಿ ತಂದು 15–18 ವರ್ಷದ ಮಕ್ಕಳಿಗೂ ಅನ್ವಯಿಸಬೇಕು. 4–6 ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

ಹುದ್ದೆಗಳ ಭರ್ತಿಗೂ ಮೊದಲು ಮರುಪರಿಶೀಲನೆ

ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಹಲವು ಬೋಧನಾ ಹುದ್ದೆಗಳು ಖಾಲಿ ಇವೆ. ಆದರೆ ಭವಿಷ್ಯದ ಅಗತ್ಯಗಳನ್ನು ಪರಿಗಣಿಸದೆ ಇವುಗಳನ್ನು ತಕ್ಷಣ ಭರ್ತಿ ಮಾಡುವುದು ಸೂಕ್ತವಲ್ಲ ಎಂದು ವರದಿ ಹೇಳಿದೆ.

ತಂತ್ರಜ್ಞಾನ ಕೃತಕ ಬುದ್ಧಿಮತ್ತೆ  ಯಾಂತ್ರೀಕರಣ ಹಾಗೂ ಉದ್ಯಮ ವಲಯದ ವೇಗವಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪದವಿ ಕಾರ್ಯಕ್ರಮಗಳ ಮರುಪರಿಶೀಲನೆ ಅಗತ್ಯ. ಹೊಸ ವಿಷಯಗಳ ಸೇರ್ಪಡೆ ಕೌಶಲಾಧಾರಿತ ಮತ್ತು ಅಂತರಶಾಖಾ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಅದಕ್ಕಾಗಿ ತಜ್ಞರ ಸಮಿತಿ ರಚಿಸಿ ಆರು ತಿಂಗಳ ಒಳಗೆ ಮೌಲ್ಯಮಾಪನ ಮಾಡಬೇಕು. ನಂತರ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲಿಯವರೆಗೂ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಪ್ರಮುಖ ಶಿಫಾರಸುಗಳು

  • ಅಂಗನವಾಡಿ ಆಶಾ ಕಾರ್ಯಕರ್ತೆಯರ ನೌಕರಿ ಕಾಯಂ

  • ಪ್ರಾಣಿ–ಮಾನವ ಸಂಘರ್ಷ ತಪ್ಪಿಸಲು ಶ್ರೀಲಂಕಾ ಮಾದರಿ ಆನೆಧಾಮ

  • ಸೋಲಾರ್‌ ಬೇಲಿ ನಿರ್ಮಾಣಕ್ಕೆ ನೀಡುತ್ತಿರುವ ಸಬ್ಸಿಡಿ ಶೇ 90ಕ್ಕೆ ಹೆಚ್ಚಳ

  • ದುಡಿಯುವ ಮಹಿಳೆಯರಿಗೆ ವಸತಿನಿಲಯಗಳ ಸ್ಥಾಪನೆ

  • ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ

  • ಬೀದಿ ವ್ಯಾಪಾರಿಗಳ ಹಿತಾಸಕ್ತಿ ರಕ್ಷಣೆಗೆ ಪ್ರತ್ಯೇಕ ನೀತಿ

  • ಕೃಷಿ ಯೋಜನೆಗಳ ಒಗ್ಗೂಡಿಸುವಿಕೆ ಸಮನ್ವಯ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.