ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕರ್ತವ್ಯ ಲೋಪ, ದುರ್ನಡತೆ ಮತ್ತು ನಿರ್ಲಕ್ಷ್ಯ ತೋರುವ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುವ ಉದ್ದೇಶದಿಂದ ‘ಕರ್ನಾಟಕ ಪೊಲೀಸ್ ಮಸೂದೆ’ಗೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪೊಲೀಸರೇ ಅಪರಾಧ ಚಟುವಟಿಕೆಗಳಲ್ಲಿ ಸಿಕ್ಕಿ ಬಿದ್ದ ಹಲವು ಪ್ರಕರಣಗಳು ವರದಿಯಾಗಿವೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ತಿದ್ದುಪಡಿಯ ಮೂಲಕ ಪೊಲೀಸ್ ಸಿಬ್ಬಂದಿ ಮಂಡಳಿಗೆ ಅಧಿಕಾರ ನೀಡಲಾಗುವುದು ಎಂದು ಅವರು ವಿವರಿಸಿದರು.
‘ಕರ್ನಾಟಕ ಪೊಲೀಸ್ ಕಾಯ್ದೆ 1963ಕ್ಕೆ (ಕರ್ನಾಟಕ ಕಾಯ್ದೆ 4, 1964) ಮತ್ತಷ್ಟು ತಿದ್ದುಪಡಿ ತರಲಾಗುವುದು. ಕರ್ತವ್ಯ ಲೋಪ, ದುರ್ನಡತೆ ಮತ್ತು ನಿರ್ಲಕ್ಷ್ಯ ತೋರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವರ್ಗಾಯಿಸಲು ತುರ್ತಾಗಿ ಆದೇಶ ಹೊರಡಿಸಬೇಕಾಗುತ್ತದೆ. ಈಗ ಇಂತಹ ವರ್ಗಾವಣೆಗಳು ಮಂಡಳಿಯ ವ್ಯಾಪ್ತಿಯಲ್ಲಿರುವುದಿಲ್ಲ. ಸರ್ಕಾರವೇ ಆ ಕೆಲಸ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಲ್ಲಿ ಮತ್ತು ಆದೇಶ ಪಡೆಯುವಲ್ಲಿ ತಡವಾಗುವ ಸಾಧ್ಯತೆ ಇದೆ’ ಎಂದರು.
ಪೊಲೀಸ್ ಸಿಬ್ಬಂದಿ ಮಂಡಳಿಯು ಪೊಲೀಸ್ ಸಿಬ್ಬಂದಿ ಮತ್ತು ಡಿವೈಎಸ್‌ಪಿ ಶ್ರೇಣಿಯವರೆಗಿನ ಅಧಿಕಾರಿಗಳನ್ನು ವರ್ಗಾಯಿಸಲು ಇಲಾಖೆಯ ಇತರೆ ಎಲ್ಲಾ ವರ್ಗಾವಣೆಗಳಿಗೆ ಸಕ್ಷಮ ಪ್ರಾಧಿಕಾರವಾಗಿದೆ. ಆದ್ದರಿಂದ ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡಲು ಮಸೂದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.