
ಬೆಂಗಳೂರು: ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಎಲ್ಲ ಘಟಕದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ತಮ್ಮ ವೈಯಕ್ತಿಕ ಕಾರ್ಯಕ್ರಮಗಳನ್ನು ಬದಿಗೊತ್ತಿ ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಗೊಳಿಸುವ ಕೆಲಸದಲ್ಲಿ ಪೊಲೀಸರು ಮಗ್ನರಾಗಿರುತ್ತಾರೆ. ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು, ತಮ್ಮ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವದಂತಹ ಕಾರ್ಯಕ್ರಮ ಆಚರಿಸುವುದು ಬಹಳ ಮಹತ್ವದ್ದು.
ಈ ವಿಶೇಷ ದಿನಗಳಲ್ಲಿ ರಜೆ ಪಡೆಯುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವನಾತ್ಮಕವಾಗಿ ಪುನಶ್ಚೇತನಗೊಳ್ಳಲು, ಕುಟುಂಬದ ಜತೆಗೆ ಸಂಭ್ರಮದಿಂದ ಸಮಯ ಕಳೆಯುವುದಕ್ಕೆ ಸಾಧ್ಯವಾಗಲಿದೆ. ಕರ್ತವ್ಯ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಆಗುತ್ತದೆ. ಮನೋಬಲವು ವೃದ್ಧಿ ಆಗುತ್ತದೆ. ಒತ್ತಡ ಕಡಿಮೆಯಾಗಿ ಒಟ್ಟಾರೆ ಕೆಲಸದ ತೃಪ್ತಿ ಉತ್ಪಾದಕತೆ ಹೆಚ್ಚಿಸುತ್ತದೆ ಎಂದು ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ಕೋರಿದಲ್ಲಿ ತಪ್ಪದೇ ರಜೆ ಮಂಜೂರು ಮಾಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.