
‘ಮಾತಿನ ಶಕ್ತಿಯೇ ವಿಶ್ವದ ಶಕ್ತಿ’
‘ವರ್ಡ್ ಪವರ್ ವರ್ಲ್ಡ್ ಪವರ್, ಜಗತ್ತಿನ ಅತಿ ದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದರು.
‘ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಮಾತಿನಂತೆ ನಡೆಯಬೇಕು. ಮಾತಿನ ಶಕ್ತಿಯೇ ವಿಶ್ವದ ಶಕ್ತಿ’ ಎಂದಿದ್ದರು.
ಶಿವಕುಮಾರ್ ಅವರ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಅಂಥದ್ದೇ ಪೋಸ್ಟರ್ ಅನ್ನು ಪೋಸ್ಟ್ ಮಾಡಲಾಗಿತ್ತು. ಆದರೆ, ‘ಅದು ನನ್ನ ಪೋಸ್ಟರ್ ಅಲ್ಲ’ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
‘ಬದುಕು ಸುಧಾರಿಸದ ಮಾತಿಗೆ ಬಲವಿಲ್ಲ’
‘ಜನರ ಬದುಕನ್ನು, ಜಗತ್ತನ್ನು ಸುಧಾರಿಸದೇ ಇರುವಂತಹ ಮಾತಿಗೆ ಯಾವ ಬಲವೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕರ್ನಾಟಕದ ಜನರಿಗೆ ನಾವು ಕೊಟ್ಟ ಮಾತು ಕೇವಲ ಘೋಷಣೆಯಲ್ಲ, ಅದೇ ನಮಗೆ ಜಗತ್ತು’ ಎಂಬ ಬರಹ ಇರುವ ಪೋಸ್ಟರ್ ಅನ್ನು ಅದರೊಂದಿಗೆ ಲಗತ್ತಿಸಿದ್ದಾರೆ.
‘ಕರ್ನಾಟಕದ ಜನರು ನೀಡಿರುವ ಅಧಿಕಾರವು ಒಂದು ಕ್ಷಣಿಕ ಮಂತ್ರವಲ್ಲ. ಅದು ಐದು ವರ್ಷಗಳ ಪೂರ್ಣ ಜವಾಬ್ದಾರಿ. ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷವು ಜನರಿಗಾಗಿ ನೀಡಿರುವ ಮಾತನ್ನು ಕಾಯಕದಲ್ಲಿ ತೋರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರಯಾಣದ ಅವಕಾಶಗಳನ್ನು ಶಕ್ತಿ ಯೋಜನೆ ಮೂಲಕ ಕಲ್ಪಿಸಲಾಗಿದೆ. 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ, 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಯುವನಿಧಿ ನೆರವು, 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆ, 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ‘ಕೊಟ್ಟ ಮಾತು’ ಉಳಿಸಿಕೊಂಡಿದ್ದೇವೆ. 2013–18ರ ನನ್ನ ಮೊದಲ ಅವಧಿಯಲ್ಲಿ, 165 ಭರವಸೆಗಳಲ್ಲಿ 157 ಭರವಸೆ ನೆರವೇರಿಸಿದ್ದೇವೆ. ಈ ಅವಧಿಯಲ್ಲಿ, 593 ಭರವಸೆಗಳಲ್ಲಿ 243ಕ್ಕೂ ಹೆಚ್ಚು ಈಡೇರಿವೆ. ಉಳಿದ ಪ್ರತಿಯೊಂದನ್ನೂ ನಮ್ಮ ಬದ್ಧತೆ, ವಿಶ್ವಾಸಾರ್ಹತೆ ಮತ್ತು ಕಾಳಜಿಯೊಂದಿಗೆ ಪೂರೈಸುತ್ತೇವೆ ಎಂದು ವಿವರಿಸಿದ್ದಾರೆ.
ಸಚಿವರ ಜತೆ ಸಿ.ಎಂ ಪ್ರತ್ಯೇಕ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಚಿವರ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದರು.
ಸಂಪುಟ ಸಭೆಗೂ ಮೊದಲು ನಡೆದ ಚರ್ಚೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಬೋಸರಾಜು ಹಾಗೂ ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಭಾಗವಹಿಸಿದ್ದರು ಎಂದು ಗೊತ್ತಾಗಿದೆ.
––
ನಾಯಕರ ದೆಹಲಿಗೆ ಕರೆಯಿಸಿ ಇತ್ಯರ್ಥ: ಖರ್ಗೆ ‘ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಸೇರಿದಂತೆ ಮೂರ್ನಾಲ್ಕು ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಲಾಗುವುದು. ಎಲ್ಲದಕ್ಕೂ ಪರಿಹಾರ ಕಂಡುಕೊಂಡು ಇತ್ಯರ್ಥ (ಸೆಟಲ್) ಮಾಡಲಾಗುವುದು ’ ಎಂದು ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ದೆಹಲಿಗೆ ತರಳುವ ಮುನ್ನ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು ‘ಪಕ್ಷದ ಹೈಕಮಾಂಡ್ ಎಂದರೆ ಒಬ್ಬ ವ್ಯಕ್ತಿಯಲ್ಲ ಒಂದು ತಂಡ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರನ್ನು ಒಳಗೊಂಡ ತಂಡವು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಮ್ಮುಖದಲ್ಲೇ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ‘ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.