ADVERTISEMENT

ಮಹಾಭಾರತದಲ್ಲಿ ಜಯಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ-ಧೃತರಾಷ್ಟ್ರರಲ್ಲ:ಯತ್ನಾಳ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 15:17 IST
Last Updated 30 ಮಾರ್ಚ್ 2025, 15:17 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಬೆಂಗಳೂರು: ಮಹಾಭಾರತದಲ್ಲಿ ಜಯ ಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ-ಧೃತರಾಷ್ಟ್ರರಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾರ್ಮಿಕವಾಗಿ ನುಡಿದಿರುವುದು ಚರ್ಚೆ ಗ್ರಾಸವಾಗಿದೆ.

ಯುಗಾದಿ ಹಬ್ಬದ ಪ್ರಯುಕ್ತ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀ ವಿಶ್ವಾವಸು ಸಂವತ್ಸರವು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ. ರೈತರಿಗೆ, ಶ್ರಮಿಕರಿಗೆ ಈ ಸಂವತ್ಸರವು ಫಲಪ್ರದಾಯಕವಾಗಲಿ ಎಂದು ಆಶಿಸುತ್ತೇನೆ. ಜನ ಸೇವೆ ಮಾಡದೆ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೆ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ. ಅಲ್ಲದೆ ರಾಮರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋ ರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ತೀಕ್ಷ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಶುಭ ಹಾರೈಕೆಗಳನ್ನು, ಬೆಂಬಲ, ಪ್ರೋತ್ಸಾಹವನ್ನು ತೋರಿಸುತ್ತಿರುವ ಎಲ್ಲಾ ಸ್ನೇಹಿತರಿಗೂ, ಅಭಿಮಾನಿಗಳಿಗೂ, ಹಿತೈಷಿಗಳಿಗೂ ಹಾಗೂ ಕರೆ ಮಾಡಿ ಬೆಂಬಲ, ಮನೋಸ್ಥೈರ್ಯ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಭಾರತ ಮಾತೆಗೆ ಜಯವಾಗಲಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.