ADVERTISEMENT

ಸರ್ವಜ್ಞರ ಜತೆ ಮಲ್ಲಿಕಾರ್ಜುನ ಖರ್ಗೆ ಹೋಲಿಕೆಯೇ ಆನೆ–ಮೀನಿನಂತೆ: ಬಿಜೆಪಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 16:57 IST
Last Updated 3 ಏಪ್ರಿಲ್ 2021, 16:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಟ್ವೀಟ್ ಸಮರ ಮುಂದುವರಿದಿದ್ದು, ಸರ್ವಜ್ಞರ ವಚನ ಪ್ರಸ್ತಾಪಿಸಿದ ‘ಕೈ’ ಪಕ್ಷಕ್ಕೆ ಕಮಲ ಪಡೆ ತಿರುಗೇಟು ನೀಡಿದೆ.

‘ಸರ್ವಜ್ಞರ ಜೊತೆ ದಲಿತ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರ ಹೋಲಿಕೆಯೇ ಆನೆ ಮತ್ತು ಮೀನಿನಂತೆ. ಉಪಮಾನಕ್ಕಿಂತ ಉಪಮೇಯವೇ ಹಿರಿದಾಗಿದೆ. ಸಂಶಯವಿದ್ದರೆ ಕನ್ನಡ ಮೇಷ್ಟ್ರು ಸಿದ್ದರಾಮಯ್ಯ ಅವರನ್ನು ಕೇಳಿ’ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

‘ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ವಿಷಕಾರಿ ಆಗಿದ್ದಾರೆ. ಅವರ ನಿಜವಾದ ಮುಖ ಅರ್ಥ ಮಾಡಿಕೊಂಡ ಕಲಬುರ್ಗಿ ಜನ ಅವರನ್ನು ಸೋಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಕಲಬುರ್ಗಿಯಲ್ಲಿ ಹೇಳಿದ್ದರು.

ಈ ಕುರಿತ ‘ಪ್ರಜಾವಾಣಿ’ ವರದಿಯನ್ನು ಲಗತ್ತಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ‘ಆನೆ ನೀರಾಟದಲಿ ಮೀನ ಕಂಡಂಜುವುದೇ, ಹೀನಮಾನವರ ಬಿರುನುಡಿಗೆ ತತ್ವದ ಜ್ಞಾನಿ ಅಂಜುವನೆ ಸರ್ವಜ್ಞ’ ಎಂದು ಟ್ವೀಟ್‌ ಮಾಡಿತ್ತು. ಇದಕ್ಕೀಗ ಬಿಜೆಪಿ ತಿರುಗೇಟು ನೀಡಿದೆ.

‘ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ 25 ಸಂಸದರು ರಾಜ್ಯದ ಜನತೆಗೆ ಅದೇನು ಅಮೃತ ಉಣಿಸಿದ್ದಾರೆ ಹೇಳಬಲ್ಲಿರಾ? ಕಲ್ಯಾಣ ಕರ್ನಾಟಕಕ್ಕೆ ಮಂಜೂರಾಗಿದ್ದ ಹಲವಾರು ಯೋಜನೆಗಳ ಸ್ಥಳಾಂತರ ಮಾಡಿದ್ದು, ಬಜೆಟ್‌ನಲ್ಲಿ ಅನ್ಯಾಯವೆಸಗಿದ್ದು, ಕೆಕೆಆರ್‌ಡಿಬಿ ಅನುದಾನ ಕಡಿತಗೊಳಿಸಿದ್ದು, ಇವೆಲ್ಲವೂ ನೀವು ಅಮೃತ ಉಣಿಸಿದ್ದೋ? ವಿಷ ಉಣಿಸಿದ್ದೋ? ಹೇಳಬಲ್ಲಿರಾ?’ ಎಂದೂ ಕಾಂಗ್ರೆಸ್ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.