ADVERTISEMENT

ರಾಜ್ಯಕ್ಕೆ ಕಡಿಮೆ ಅನುದಾನ ಸಿಗಲು ಸಿದ್ದರಾಮಯ್ಯ ಅವರೇ ನೇರ ಕಾರಣ: ಬಿಜೆಪಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2024, 8:48 IST
Last Updated 28 ಮಾರ್ಚ್ 2024, 8:48 IST
   

ಬೆಂಗಳೂರು: ರಾಜ್ಯಕ್ಕೆ ತೆರಿಗೆ ಪಾವತಿಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪದ ಕುರಿತು ವಾಗ್ದಾಳಿ ನಡೆಸಿರುವ ಬಿಜೆಪಿ, ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವವರೆಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯನವರ ನಂಬಿಕೆಯಾಗಿದೆ. ಈಗ ಆ ಸರಣಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಪಾವತಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂಬ ಸುಳ್ಳಿನ ಧಾರವಾಹಿಯನ್ನೇ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

ಮೊದಲ ಐದು ವರ್ಷಗಳು ಮಾತ್ರ ರಾಜ್ಯಗಳಿಗೆ ಪರಿಹಾರ ನೀಡಲಾಗುವುದು ಎಂಬುದನ್ನು ಜಿಎಸ್‌ಟಿ ಮಂಡಳಿ ರಚನೆಯಾದ ಸಂದರ್ಭದಲ್ಲಿಯೇ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೂ, ಸ್ವಯಂಘೋಷಿತ ಸಂವಿಧಾನ ತಜ್ಞರಾಗಿರುವ ಸಿಎಂ ಈ ವಿಷಯದಲ್ಲಿ ಸುಳ್ಳು ಹೇಳುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.

15ನೇ ಹಣಕಾಸು ಸಮಿತಿಯ ಮುಂದೆ ರಾಜ್ಯದ ಬೇಕು ಬೇಡಗಳನ್ನು ಸರಿಯಾಗಿ ವಿವರಿಸದಿರುವುದು ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರ ತಪ್ಪು. 15ನೇ ಹಣಕಾಸು ಸಮಿತಿಯಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ಸಿಗಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.

2020 ರಿಂದ 2023ರವರಗೆ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಯಾರ ನೆರವನ್ನು ಪಡೆಯದೆ ಎನ್‌ಡಿಆರ್‌ಎಫ್‌/ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಪರಿಹಾರ ನೀಡಿತ್ತು. ಈಗ ಉಂಟಾಗಿರುವ ಬರಕ್ಕೆ ಪರಿಹಾರ ನೀಡಲು ಕಾಂಗ್ರೆಸ್‌ಗೆ ಏಕೆ ಸಾಧ್ಯವಾಗುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ ₹5,300 ಕೋಟಿ ಬಿಡುಗಡೆ ಮಾಡಬೇಕೆಂದರೆ, ರಾಜ್ಯ ಸರ್ಕಾರದಿಂದ ಸರಿಯಾದ ಪ್ರಸ್ತಾವನೆ ಹೋಗಬೇಕು. ಆದರೆ, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಇದುವರೆಗೂ ಸರಿಯಾದ ಪ್ರಸ್ತಾವನೆ ಹೋಗಿಲ್ಲ ಏಕೆ ಎಂದು ಬಿಜೆಪಿ ಪ್ರಶ್ನಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ, ತಮ್ಮ ಹೆಸರಿನ ಚೀಲ ಹಾಕಿ ಅದಕ್ಕೆ ‘ಅನ್ನ ಭಾಗ್ಯ’ ಎಂದು ಹೆಸರಿಟ್ಟಿದ್ದಾರೆ. ಈಗಲೂ ಸಹ ‘ಗರೀಬ್‌ ಕಲ್ಯಾಣ್‌ ಯೋಜನೆ’ಯಡಿ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನೇ ರಾಜ್ಯ ಸರ್ಕಾರ ತನ್ನದು ಎಂದು ನೀಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲಿ ಬಿಡಿಗಾಸು ಅಭಿವೃದ್ಧಿ ಮಾಡದೆ, ಪ್ರತಿಯೊಬ್ಬ ಕನ್ನಡಿಗರ ಮೇಲೆ ಹೆಚ್ಚುವರಿ ₹ 28 ಸಾವಿರ ಸಾಲ ಹೊರೆಸಿರುವುದು ಸಿದ್ದರಾಮಯ್ಯ ಅವರ ಸಾಧನೆಯಾಗಿದೆ ಎಂದು ಟೀಕಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಕರ್ನಾಟಕದ ಆರ್ಥಿಕತೆ ಸುಭೀಕ್ಷವಾಗಿತ್ತು. ನಾವೀನ್ಯತೆಯ ಸೂಚ್ಯಂಕದಲ್ಲಿ ಕರ್ನಾಟಕ ನಂಬರ್‌ 1 ಆಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 10 ತಿಂಗಳೊಳಗೆ ಕರ್ನಾಟಕ ಅರಾಜಕತೆಯಲ್ಲಿ ನಂಬರ್ 1 ಆಗಿದೆ. ರಾಜ್ಯದ ಆರ್ಥಿಕತೆ ಕುಸಿದು ದಿವಾಳಿಯತ್ತ ಸಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.