ಬಿ.ವೈ.ವಿಜಯೇಂದ್ರ
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರು ಬಳಸಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವವರ ಮೇಲೆ ಯಾವ ಕ್ರಮಗಳನ್ನೂ ಜರುಗಿಸಲಿಲ್ಲ. ಪಿಎಫ್‌ಐ, ಕೆಎಫ್‌ಡಿಯಂತಹ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸಿಲ್ಲ. ಅವರ ಚಟುವಟಿಕೆಗಳ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸುವ ನಿರ್ಧಾರವನ್ನು ಕೈಗೊಳ್ಳಲಿಲ್ಲ’ ಎಂದು ದೂರಿದ್ದಾರೆ.
‘ಸ್ವಾತಂತ್ರ್ಯಾ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮರ್ಪಣಾ ಸೇವೆ ಹಾಗೂ ರಾಷ್ಟ್ರಭಕ್ತಿ ಮೂಡಿಸುವ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಾ ಬಂದಿವೆ. ಇದನ್ನು ಹತ್ತಿಕ್ಕಲು ಅಂದಿನಿಂದಲೂ ಇಂತಹ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ದೇಶದ ಕೋಟ್ಯಂತರ ಜನರ ಬೆಂಬಲ ಹಾಗೂ ಆಶೀರ್ವಾದ ಪಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಎರಡು-ಮೂರು ರಾಜ್ಯಗಳಲ್ಲಿ ಅಧಿಕಾರ ಇಟ್ಟುಕೊಂಡು ಆರ್‌ಎಸ್‌ಎಸ್ ನಿಷೇಧಿಸಲು ಕಾಂಗ್ರೆಸ್ ಮುಂದಾಗಿದೆ. ಇದು ಮೂರ್ಖತನದ ಕೆಲಸ. 1948ರಲ್ಲಿ ನಿಷೇಧಿಸಿದಾಗ ಏನಾಯಿತು? ತುರ್ತು ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರನ್ನು ಬಂಧಿಸಿದ್ದು ಫಲಕೊಟ್ಟಿತಾ’ ಎಂದು ಪ್ರಶ್ನಿಸಿದರು.
‘ನೆಹರೂ, ಇಂದಿರಾ ಗಾಂಧಿ ಅವರಿಗೇ ಹೆದರದ ಆರ್‌ಎಸ್‌ಎಸ್, ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಬದುಕುವ ಪ್ರಿಯಾಂಕ್, ಕುರ್ಚಿಗಾಗಿ ದಿನನಿತ್ಯವೂ ಜಗಳಾಡುವ ಸಿದ್ದರಾಮಯ್ಯ ಅವರಿಗೆ ಹೆದರುತ್ತದೆಯೇ? ಆರ್‌ಎಸ್‌ಎಸ್ ಒಂದು ಹೆಮ್ಮರ. ಇಂಥ ಸರ್ಕಾರಗಳನ್ನು ದೇಶದಲ್ಲಿ ಬಹಳಷ್ಟು ನೋಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.