
ಸತೀಶ್ ಸೈಲ್
ಬೆಂಗಳೂರು: ‘ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನ್ಯಾಯಾಲಯದ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ’ ಎಂಬ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದೆ.
ಸತೀಶ್ ಸೈಲ್ ಮತ್ತಿತರರ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣವನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶುಕ್ರವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಸತೀಶ್ ಸೈಲ್ ಪರ ಕಿರಿಯ ವಕೀಲರು, ‘ಅರ್ಜಿದಾರರ ಪರ ಹಿರಿಯ ವಕೀಲರು ಮತ್ತು ಅರ್ಜಿದಾರರು ಧಾರವಾಡಕ್ಕೆ ತೆರಳಿರುವ ಕಾರಣದಿಂದ ಗೈರಾಗಿದ್ದಾರೆ. ಆದ್ದರಿಂದ ವಿನಾಯತಿ ನೀಡಬೇಕು’ ಎಂದು ಕೋರಿದರು.
ಆದರೆ, ನ್ಯಾಯಾಧೀಶರು, ‘ಇದು 2014ರ ಪ್ರಕರಣ. ನ್ಯಾಯಾಲಯ ಈ ಹಿಂದಿನ ಸಂದರ್ಭಗಳಲ್ಲಿ ಅರ್ಜಿದಾರರ ಗೈರು ಹಾಜರಿಗೆ ವಿನಾಯತಿ ನೀಡಿತ್ತು. ಆದಾಗ್ಯೂ, ನ್ಯಾಯಾಲಯ ಪಾಟಿ ಸವಾಲು ನಡೆಸುತ್ತಿರುವ ಈ ಸಂದರ್ಭದಲ್ಲಿ, ವಿಚಾರಣೆ ವಿಳಂಬಗೊಳಿಸಲು ವಕೀಲರು ಮುಂದೂಡಿಕೆಯ ಮನವಿ ಮಾಡಿದ್ದಾರೆ. ಬೇರೊಂದು ನ್ಯಾಯಾಲಯದಲ್ಲಿ ಕಾರ್ಯ ನಿರತವಾಗಿದ್ದೇನೆ ಎಂಬ ಕಾರಣಕ್ಕೆ ವಕೀಲರ ಹಾಜರಿಗೆ ವಿನಾಯತಿ ನಿಡಿ ವಿಚಾರಣೆಯನ್ನು ಮುಂದೂಡಲು ಆಧಾರ ಎನಿಸುವುದಿಲ್ಲ ಎಂಬ ಸ್ಥಾಪಿತ ಕಾನೂನಿನ ಅಡಿಯಲ್ಲಿ ಈ ಅರ್ಜಿ ತಿರಸ್ಕರಿಸಲಾಗುತ್ತಿದೆ’ ಎಂದು ಆದೇಶಿಸಿದರು.
‘ಈ ನ್ಯಾಯಾಲಯ ಹಾಲಿ ಮತ್ತು ಮಾಜಿ ಸಂಸದರು- ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ ಸ್ಥಾಪಿಸಿದ ವಿಶೇಷ ನ್ಯಾಯಾಲಯವಾಗಿದೆ. ಹಾಲಿ ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲಾ ಆರೋಪಿಗಳೂ ಹಾಜರಿರುವಾಗ ಮೊದಲ ಆರೋಪಿಯಾದ ಇವರೊಬ್ಬರ ಗೈರನ್ನು ಮನ್ನಿಸಲಾಗದು. ಹಾಗಾಗಿ, ಸತೀಶ್ ಸೈಲ್ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಜಾರಿ ನಿರ್ದೇಶನಾಯ (ಇ.ಡಿ) ದಾಖಲಿಸಿರುವ ಮತ್ತೊಂದು ಪ್ರಕರಣದಲ್ಲಿ ವೈದ್ಯಕೀಯ ಚಿಕಿತ್ಸೆ ಆಧಾರದಡಿ ಮಧ್ಯಂತರ ಜಾಮೀನು ಪಡೆದು ಹೊರಗಿರುವ ಸತೀಶ್ ಸೈಲ್ ಅವರ ಜಾಮೀನು ಅರ್ಜಿಯನ್ನೂ (ವೈದ್ಯಕೀಯ ಕಾರಣದ ಅರ್ಜಿ) ನ್ಯಾಯಾಧೀಶರು ವಜಾಗೊಳಿಸಿ ಆದೇಶಿಸಿದರು.
ಸಾಕ್ಷಿ ವಿಚಾರಣೆಯಲ್ಲಿ 24 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.