ADVERTISEMENT

ಮೀಸಲಾತಿ ಹಂಚಿಕೆ | ಜೇನ್ನೊಣಗಳಿಂದ ಕಚ್ಚಿಸಿಕೊಂಡರೂ ಸಿಹಿ ಹಂಚಿರುವೆ: ಬೊಮ್ಮಾಯಿ‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 7:37 IST
Last Updated 26 ಮಾರ್ಚ್ 2023, 7:37 IST
 ಬಸವರಾಜ ಬೊಮ್ಮಾಯಿ‌
ಬಸವರಾಜ ಬೊಮ್ಮಾಯಿ‌   

ಹುಬ್ಬಳ್ಳಿ: ‘ಮೀಸಲಾತಿ‌ ಜೇನುಗೂಡಿದ್ದಂತೆ. ಅಲ್ಲಿಗೆ ಕೈ ಹಾಕಿದರೆ ಕಚ್ಚಿಸಿಕೊಳ್ಳುವುದು ಖಚಿತ ಎಂದು ಕಾಂಗ್ರೆಸ್‌ನವರು ಹೇಳುತ್ತಲೇ ಬಂದಿದ್ದರು. ಜೇನ್ನೊಣಗಳಿಂದ ಕಚ್ಚಿಸಿಕೊಂಡರೂ ಜೇನು‌‌ ಹಂಚುವ ಕೆಲಸ ಮಾಡಿದ್ದೇನೆ‌’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಲ್ಲಿನ ಆದರ್ಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಮೀಸಲಾತಿ ಹಂಚಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೂಡಿಗೆ ಕೈ ಹಾಕದೆ ಜೇನಿನ ಹನಿ ಸಿಗುವುದಿಲ್ಲ ಎಂಬುದನ್ನು ಅರಿತುಕೊಂಡೇ, ನಮ್ಮ ಸರ್ಕಾರ ಮಹತ್ವವಾದ ನಿರ್ಧಾರ ಕೈಗೊಂಡಿದೆ’ ಎಂದರು.

‘ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದಲೂ ಇದೆ. ‌ಕಾಂಗ್ರೆಸ್ ಸರ್ಕಾರ ಆಶ್ವಾಸನೆ ಕೊಡುತ್ತಾ, ಮೂಗಿಗೆ ತುಪ್ಪ ಸವರಿಕೊಂಡು ಬಂದಿತ್ತು‌. ಕಳೆದ ಸಲ ತಮ್ಮ ಸರ್ಕಾರವಿದ್ದಾಗಲೂ ಕೈ ಕೊಟ್ಟಿತ್ತು. ಬಿಜೆಪಿಗೆ ಏನೂ ಮಾಡಲಾಗುವುದಿಲ್ಲ ಎಂದು ಕಾಂಗ್ರೆಸ್‌ನವರು ಅಂದುಕೊಂಡಿದ್ದರು. ನಮಗೆ ಬದ್ಧತೆ ಇದೆ. ಮೀಸಲಾತಿಗೆ ಸಂಬಂಧಿಸಿದ ವರದಿ ಅಧ್ಯಯನ ಮಾಡಿ, ಸಂಪುಟ ಸಮಿತಿ ರಚಿಸಿ ಅಂತಿಮ ನಿರ್ಧಾರ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ನಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದೆ ಎಂಬ ಹತಾಶ ಭಾವನೆ ಕಾಂಗ್ರೆಸ್‌ನವರದ್ದು. ಅವರು ಯಾವಾಗಲೂ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳನ್ನು ಯಾಮಾರಿಸಿಕೊಂಡು ಬಂದಿದ್ದಾರೆ. ಅನುಕಂಪದ ಹೇಳಿಕೆಗಳನ್ನು ನೀಡಿ, ಈ ಸಲ ಮತ ಪಡೆಯಬಹುದು ಎಂದುಕೊಂಡಿದ್ದರು. ಆದರೆ, ಈ ವಿಷಯದಲ್ಲಿ ನಿರ್ಣಯ ಮಾಡುವ ಸರ್ಕಾರವಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಅಭಿವೃದ್ಧಿ ಸೇರಿದಂತೆ ಎಲ್ಲಾ ವಿಷಯಗಳನ್ನು ಚರ್ಚಿಸಿ ನಾವು ತೀರ್ಮಾನ ಕೈಗೊಂಡಿದ್ದೇವೆ’ ಎಂದು ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದರು.

ಅಲ್ಪಸಂಖ್ಯಾತರ ಹಿತರಕ್ಷಣೆ: ‘ಅಲ್ಪಸಂಖ್ಯಾತ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಇಡಬ್ಲ್ಯೂಎಸ್‌ನಲ್ಲಿ ಅವರಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಹೀಗಿರುವಾಗ ಅವರಿಗೆ ಹೇಗೆ ಅನ್ಯಾಯವಾಗುತ್ತದೆ? ಹಿಂದಿನ ಮೀಸಲಾತಿಯಲ್ಲಿದ್ದ ಆರ್ಥಿಕ ಮಾನದಂಡ ಹಾಗೂ ಷರತ್ತುಗಳು ಈಗಲೂ ಅನ್ವಯವಾಗುತ್ತವೆ. ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ವಿಷಯದಲ್ಲಿ ದಾರಿ ತಪ್ಪಿಸುವ ಅವಶ್ಯಕತೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹದಾಯಿ ಟೆಂಡರ್‌ಗೆ ತೊಡಕಿಲ್ಲ: ‘ಮಹದಾಯಿ ಕಳಸಾ–ಬಂಡೂರಿ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಶೀಘ್ರ ಅನುಮತಿ ಸಿಗುವ ವಿಶ್ವಾಸವಿದೆ. ಚುನಾವಣಾ ನೀತಿ ಸಂಹಿತಿ ಜಾರಿಯಾದರೂ ಟೆಂಡರ್‌ಗೆ ಯಾವುದೇ ತೊಡಕಾಗುವುದಿಲ್ಲ. ಚುನಾವಣೆ ನಂತರ ಕಾಮಗಾರಿ ಆರಂಭವಾಗಲಿದೆ’ ಎಂದರು.

‘ಚುನಾವಣೆ ಘೋಷಣೆಯಾದ ನಂತರ, ಸೂಕ್ತ ಸಮಯದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದೆ. ಇಂದು ನಡೆಯುವ ಕೋರ್ ಕಮಿಟಿಯಲ್ಲಿ ಚುನಾವಣೆ ನಿರ್ಹಣೆ ಕುರಿತು ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ಮುಖ್ಯಮಂತ್ರಿಗೆ ಸನ್ಮಾನ
ಹುಬ್ಬಳ್ಳಿ:
ಒಳ ಮೀಸಲಾತಿ ಜಾರಿ ಸ್ವಾಗತಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪರವಾಗಿ ಘೋಷಣೆ ಕೂಗಿದರು.

ಬೆಳಿಗ್ಗೆ ಮುಖ್ಯಮಂತ್ರಿ ನಿವಾಸದ ಬಳಿ ಜಮಾಯಿಸಿದ್ದ ಮುಖಂಡರು ಮೀಸಲಾತಿ ಜಾರಿಗಾಗಿ ಅಭಿನಂದನೆ ಸಲ್ಲಿಸಿದರು. ನಂತರ, ಮೈಸೂರು ಪೇಟ ತೊಡಿಸಿ, ಹಾರ ಹಾಕಿ ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.