ADVERTISEMENT

ಬಿಜೆಪಿಗರ ಬಾಯಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಅಧ್ವಾನ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2021, 11:46 IST
Last Updated 16 ಜುಲೈ 2021, 11:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಕೊರತೆ ಎದುರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಿಜೆಪಿಗರ ಬಾಯಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಅಧ್ವಾನ!, ದಿನದಿನಕ್ಕೂ ಲಸಿಕೆ ಕೊರತೆಯ ತೊಡಕುಗಳನ್ನು ಸರಿಪಡಿಸಿಕೊಳ್ಳುತ್ತಾ ಲಸಿಕೆ ವಿತರಣೆಗೆ ವೇಗ ನೀಡಬೇಕಿತ್ತು, ಆದರೆ, ಅಸಮರ್ಥ ಬಿಜೆಪಿ ನಾಯಕರಿಂದ ದಿನ ಕಳೆದಂತೆ ಪರಿಸ್ಥಿತಿ ಅಧೋಗತಿಗೆ ಸಾಗಿದೆ’ ಎಂದು ಕಿಡಿಕಾರಿದೆ.

ಕೋವಿಡ್‌ ಮೂರನೇ ಅಲೆ ಬರುವ ಮುನ್ಸೂಚನೆ ಇದ್ದರೂ ಕೂಡ ಲಸಿಕೆ ಪೂರೈಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ADVERTISEMENT

‘ಜನರ ಜೀವದ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದ ಬಿಜೆಪಿ ಸರ್ಕಾರದ ಅಯೋಗ್ಯತನಕ್ಕೆ ಜನರು ಮಳೆ, ಚಳಿಯಲ್ಲಿ ಪರದಾಡಿದರೂ ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊಡಲಾಗುತ್ತಿದ್ದ ಲಸಿಕೆ 1 ಲಕ್ಷದಿಂದ 35 ಸಾವಿರಕ್ಕೆ ಕುಸಿತ ಕಂಡಿದ್ದೇಕೆ? ಸಚಿವ ಸುಧಾಕರ್ ಈ ಬಗ್ಗೆ ಉತ್ತರಿಸುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪೆಟ್ರೋಲ್‌ ಲೀಟರ್‌ಗೆ ₹500 ಆಗುವುದರಲ್ಲಿ ಅನುಮಾನವಿಲ್ಲ’
ಎರಡೇ ತಿಂಗಳಲ್ಲಿ ಪ್ರತಿ ಲೀಟರ್ ಪೇಟ್ರೋಲ್‌ಗೆ ₹11.14 ರೂಪಾಯಿಗಳಷ್ಟು ಏರಿಕೆಯಾಗಿದೆ, 40 ಬಾರಿ ಹೆಚ್ಚಳ ಕಂಡಿದೆ. ಇದೇ ಗತಿಯಲ್ಲಿ ಏರಿಕೆಯಾಗುತ್ತಿದ್ದರೆ ಶೀಘ್ರದಲ್ಲಿ ₹500 ಆಗುವುದರಲ್ಲಿ ಅನುಮಾನವೇ ಇಲ್ಲ. ಪ್ರಧಾನಿ ಮೋದಿ ಅವರಿಗೆ 2014ರ ಮುಂಚಿನ ಅವರದ್ದೇ ಭಾಷಣದ ಮಾತುಗಳ ಬದ್ಧತೆಯನ್ನು ಮರೆತು, ಜನರ ಸುಲಿಗೆಗೆ ಇಳಿದಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.