
ಕನಕಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ ಬಳಿಕ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭ್ಯರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಇತರರು ಇದ್ದಾರೆ
ಕನಕಪುರ (ರಾಮನಗರ): ‘ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಪಕ್ಷದ ನಾಯಕರನ್ನು ನಾನೇನು ಕೇಳಿಲ್ಲ. ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವವರು. ಪಕ್ಷವನ್ನು ಮುಜುಗರಕ್ಕೀಡು ಮಾಡುವುದಕ್ಕೆ ಅಥವಾ ದುರ್ಬಲಗೊಳಿಸುವುದಕ್ಕೆ ನಾನು ಇಷ್ಟಪಡುವುದಿಲ್ಲ. ಪಕ್ಷ ಮತ್ತು ಕಾರ್ಯಕರ್ತರಿದ್ದರೆ ನಾವೇ ಹೊರತು, ನಮ್ಮಿಂದ ಪಕ್ಷವಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕನಕಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹಿರಿಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಆಸ್ತಿ. ವಿರೋಧ ಪಕ್ಷದ ನಾಯಕರಾಗಿದ್ದ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಎರಡನೇ ಸಲ ಸಿ.ಎಂ ಆಗಿ ಎರಡೂವರೆ ವರ್ಷ ಮುಗಿಸಿರುವ ಅವರು, ಮುಂದಿನ ಬಜೆಟ್ ಸಹ ಮಂಡಿಸುವುದಾಗಿ ಹೇಳಿದ್ದಾರೆ’ ಎಂದರು.
‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ. ಪ್ರಚಾರದ ಸಂದರ್ಭದಲ್ಲಿ ಕೆಲವೆಡೆ ನನ್ನ ಮುಖ ನೋಡಿ ಮತ ಕೊಡಿ ಎಂದು ಕೇಳಿದ್ದೇನೆ. ನನ್ನೊಂದಿಗೆ ಎಲ್ಲರೂ ಸಾಮೂಹಿಕವಾಗಿ ಮತ ಯಾಚಿಸಿದ್ದಾರೆ. ಅದರಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದು ಹೇಳಿದರು.
‘ತಮ್ಮ ಪರವಾಗಿ ಕೆಲ ಶಾಸಕರು ದೆಹಲಿಗೆ ಭೇಟಿ ನೀಡಿದ್ದಾರಲ್ಲ?’ ಎಂಬ ಪ್ರಶ್ನೆಗೆ, ‘ನನ್ನ ಪರವಾಗಿ ದೆಹಲಿಗೆ ಹೋಗಿ ಎಂದು ಯಾರಿಗೂ ನಾನು ಹೇಳಿಲ್ಲ. ಫೋನ್ ಕಾಲ್ ಸಹ ಮಾಡಿಲ್ಲ. ಹೋಗಿರುವವರಿಗೆ ಯಾಕೆ ಹೋಗಿದ್ದೀರಿ ಎಂದು ಸಹ ಕೇಳಿಲ್ಲ. ಕೆಲವರು ಸಚಿವರಾಗಲು ಓಡಾಡುತ್ತಿದ್ದಾರೆ. ಅದೆಲ್ಲಾ ಅವರಿಗೆ ಬಿಟ್ಟದ್ದು’ ಎಂದು ಪ್ರತಿಕ್ರಿಯಿಸಿದರು.
‘ಲಿಂಗಾಯತ ಕೋಟಾದಲ್ಲಿ ನಾನೇಕೆ ಸಿ.ಎಂ ಆಗಬಾರದು’ ಎಂಬ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ ಹಾಗೂ
‘ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪಕ್ಷದೊಳಗೆ ಶಾಸಕರ ಖರೀದಿ’ ಎಂಬ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆ ಕುರಿತ ಪ್ರಶ್ನೆಗೆ, ‘ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಇಷ್ಟಕ್ಕೂ ನಾನು ಅವರ ವಕ್ತಾರನಲ್ಲ’ ಎಂದು ಪ್ರತಿಕ್ರಿಯಿಸಲು ಡಿಸಿಎಂ ನಿರಾಕರಿಸಿದರು.
ಆನೇಕಲ್ ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಹಾಗೂ ಇತರರ ಇದ್ದರು.
‘ಇವತ್ತು ನಾನು ಉಪ ಮುಖ್ಯಮಂತ್ರಿಯಾಗಿದ್ದೇನೆ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಯಾಗಲಿ ಎಂದು ನನ್ನ ಬೆಂಬಲಿಗರು ಸೇರಿದಂತೆ ಹಲವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ. ಆದರೆ, ಇವತ್ತಿನ ಪೂಜೆಗಿಂತ ನಾನು ಜೈಲಿನಲ್ಲಿದ್ದಾಗ ನನ್ನ ಬಿಡುಗಡೆಗಾಗಿ ಪ್ರಾರ್ಥಿಸಿ ಮಾಡಿದ ಪೂಜೆ ಮುಖ್ಯವಾದುದು. ಆಗ ಎಷ್ಟೋ ತಾಯಂದಿರು, ಹಿರಿಯರು, ಯುವಜನರು ಹಾಗೂ ದೇವಸ್ಥಾನದ ಅರ್ಚಕರು ಸಹ ನನಗಾಗಿ ಪೂಜೆ ಮಾಡಿದ್ದಾರೆ. ಹರಕೆ ಹೊತ್ತಿದ್ದಾರೆ. ನಾನು ಬಿಡುಗಡೆಯಾಗುವವರೆಗೆ ಹಲವರು ಚಪ್ಪಲಿ ಧರಿಸದೆ ಓಡಾಡಿದ್ದಾರೆ. ಹಲವರು ತಿಹಾರ್ ಜೈಲಿಗೆ ಬಂದು ಭೇಟಿ ಮಾಡಿ, ಕಷ್ಟಕಾಲದಲ್ಲಿ ಜೊತೆಗೆ ನಿಂತಿದ್ದಾರೆ. ನನ್ನ ಪತ್ನಿ ಮತ್ತು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಈಗಿನ ಪೂಜೆಗಿಂತ ಆಗಿನ ಪೂಜೆ ಮುಖ್ಯವಾದುದು. ಅದರ ಋಣ ತೀರಿಸಲಾಗದು’ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.