ADVERTISEMENT

ಹೈಕಮಾಂಡ್ ಒಪ್ಪಿದರೆ ಪೂರ್ಣಾವಧಿ CM:ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಮುಖ್ಯಮಂತ್ರಿ ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೊ ಹಾಗೆ ನಾವು ಕೇಳುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಹೈಕಮಾಂಡ್ ಒಪ್ಪಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತೇನೆ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಸ್ತಾಪಿಸಿದಾಗ ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೋಮವಾರ ಮಾತನಾಡಿದ ಅವರು, ‘ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ಸೋನಿಯವರ ಪತಿ ತೀರಿಕೊಂಡಿದ್ದರು. ಹೀಗಾಗಿ, ಸಂತಾಪ ಸೂಚಿಸಲು ದೆಹಲಿಯಲ್ಲಿರುವ ಅವರ ಮನೆಗೆ ಹೋಗಿದ್ದೆ’ ಎಂದರು.

ADVERTISEMENT

‘ನಾನು ತಿಹಾರ್ ಜೈಲಿನಲ್ಲಿದ್ದಾಗ ಅಂಬಿಕಾ ಸೋನಿಯವರು ಸೋನಿಯಾ ಗಾಂಧಿ ಅವರ ಜೊತೆ ಬಂದು ಭೇಟಿ ಮಾಡಿದ್ದರು. ಎಸ್.ಎಂ.ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ನಮಗೆ ಪ್ರಧಾನ ಕಾರ್ಯದರ್ಶಿ ಆಗಿದ್ದರು. ನನ್ನನ್ನು ತಮ್ಮನಂತೆ ಕಂಡಿದ್ದ ಅವರು, ನನ್ನ ಕೆಲಸಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು’ ಎಂದರು.

‘ನೀವು ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿದ್ದೀರಿ ಎಂದು ಚರ್ಚೆ ಆಗುತ್ತಿದೆಯಲ್ಲ’ ಎಂದಾಗ, ‘ನಾನು ದೆಹಲಿಗೆ ಹೋಗಿದ್ದ ವಿಷಯ, ಕೆಲಸದ ಬಗ್ಗೆ ಮಾತ್ರ ಹೇಳಬಲ್ಲೆ. ಹೈಕಮಾಂಡ್ ಭೇಟಿ ಬಗ್ಗೆ ನೀವು ಮಾಧ್ಯಮದವರು, ಸಾರ್ವಜನಿಕರು, ಇನ್ನೂ ಬೇರೆಯವರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಿ. ಯಾರು ಬೇಕಾದರೂ ಮಾತನಾಡಿಕೊಳ್ಳಲಿ. ನನಗದು ಸಂಬಂಧಪಡದ ವಿಷಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.