ADVERTISEMENT

ಹಿಜಾಬ್ ನಿಷೇಧ ವಿಚಾರ: ಪರ–ವಿರೋಧದ ಮೇಲಾಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಾಲೆಗಳಲ್ಲಿ ಹಿಜಾಬ್‌ ನಿಷೇಧ ಹಿಂದಕ್ಕೆ ಪಡೆಯುವುದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಕೆಲವು ಸಂಘಟನೆಗಳು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಹಿಜಾಬ್‌ಗೆ ಅವಕಾಶ ಕೊಟ್ಟರೆ ಶಾಲೆ– ಕಾಲೇಜುಗಳು ಕೇಸರಿಮಯವಾಗಲಿವೆ ಎಂಬ ಎಚ್ಚರಿಕೆಯನ್ನು ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ನ ಕೆಲವು ಮುಖಂಡರು ನೀಡಿದ್ದಾರೆ. ಹಿಜಾಬ್‌ ನಿಷೇಧ ನಿರ್ಧಾರ ವಾಪಸ್‌ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಮುಸ್ಲಿಂ ತುಷ್ಟೀಕರಣದ ಪರಮಾವಧಿ ಎಂದೂ ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ

‘ಹಿಜಾಬ್‌ ವಿವಾದಕ್ಕೆ ತೆರೆ ಸ್ವಾಗತಾರ್ಹ’

ADVERTISEMENT

ಬೆಂಗಳೂರು: ಸಾವಿರಾರು ಸಂಖ್ಯೆಯ ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದ ಕಕ್ಷೆಯಿಂದ ಹೊರತಳ್ಳಿದ ಹಿಜಾಬ್ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಹಿಜಾಬ್‌ ನಿಷೇಧ ವಾಪಸ್‌ ಪಡೆಯುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಮಹಿಳೆಯರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ, ವಸ್ತ್ರ ಸಂಹಿತೆಯೂ ಸೇರಿದಂತೆ ಮಹಿಳೆಯರ ಆಯ್ಕೆ ಸ್ಯಾತಂತ್ರ್ಯಕ್ಕೆ ತಡೆಯೊಡ್ಡುವ ಕ್ರಮಗಳನ್ನು ಜನವಾದಿ ಮಹಿಳಾ ಸಂಘಟನೆ ಬೆಂಬಲಿಸುವುದಿಲ್ಲ. ಶಿಕ್ಷಣ ಪಡೆಯುವುದು ಆದ್ಯತೆಯಾಗಬೇಕು ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಕಾರ್ಯದರ್ಶಿ ದೇವಿ, ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಪ್ರತಿಪಾದಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಶಿರವಸ್ತ್ರ ಕುರಿತು ವಿವಾದ ಎಬ್ಬಿಸಲಾಯಿತು. ಅದನ್ನು ಅಲ್ಲಿಯೇ ಪರಿಹರಿಸುವ ಬದಲು ಗದ್ದಲ ಮಾಡಲಾಯಿತು. ಲೋಡ್‌ಗಟ್ಟಲೆ ಕೇಸರಿ ಶಾಲುಗಳನ್ನು ಸರಬರಾಜು ಮಾಡಿ ರಾಜಕೀಯ ಲಾಭಕ್ಕಾಗಿ ಧರ್ಮಗಳ ನೆಲೆಯಲ್ಲಿ ವಿವಾದವನ್ನಾಗಿ ಪರಿವರ್ತಿಸಲಾಯಿತು. ಶಿಕ್ಷಣಕ್ಕೆ ತೆರೆದುಕೊಂಡ ಮೊದಲ ತಲೆಮಾರಿನ ಸಾವಿರಾರು ಯುವತಿಯರು ಆಧುನಿಕ ಆಲೋಚನಾ ಕ್ರಮಕ್ಕೆ ತೆರೆದುಕೊಳ್ಳುವ ಅವಕಾಶದಿಂದ ವಂಚಿತರಾಗಿ ಧರ್ಮದ ಕಟ್ಟು ಕಟ್ಟಳೆಯ ಒಳಗೆ ಇನ್ನಷ್ಟು ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಈಗಿನ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯು ಈ ಮೊದಲು ಹೊರಡಿಸಿದ ಸಮವಸ್ತ್ರ ಕಡ್ಡಾಯದ ವಿವಾದಿತ ಸುತ್ತೋಲೆಯ ಬಗ್ಗೆ ಕೂಡ ಗಮನ ಹರಿಸಬೇಕು ಎಂದಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಕ್ತ ಅವಕಾಶ ಕೊಡಿ: ತೆಹ್ರೀನ್ ಬೇಗಂ ಮನವಿ

ಉಡುಪಿ: ಶಾಲಾ–ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಹಿಂಪಡೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟರೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಹಿಜಾಬ್ ಪರವಾಗಿ ಸುಪ್ರಿಂಕೋರ್ಟ್‌ ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿ ತೆಹ್ರೀನ್ ಬೇಗಂ ಹೇಳಿದ್ದಾರೆ.

‘ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸಿದಾಗ ಸಮುದಾಯ ಧ್ವನಿ ಎತ್ತಿದ್ದಕ್ಕೆ ಪ್ರತಿಫಲ ದೊರೆತಿದೆ. ನನ್ನ ವಸ್ತ್ರ ನನ್ನ ಹಕ್ಕಾಗಿದ್ದು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂಬುದನ್ನು ಸರ್ಕಾರ ತೋರಿಸಬೇಕು. ಮುಂದೆಯೂ ಸಂವಿಧಾನದ ಆಶಯಕ್ಕೆ ಬದ್ಧವಾಗಿ ಹೆಣ್ಣು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದು ಶಿಕ್ಷಣದ ಮುಖಾಂತರ ಬದಲಾವಣೆ ತರಲು ಅವಕಾಶ ಮಾಡಿಕೊಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಸ್ವಾಗತ: ‘ಸಂವಿಧಾನವನ್ನು ಪ್ರೀತಿಸುವವರೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸ್ವಾಗತ ಮಾಡುತ್ತಾರೆ. ಹಿಂದಿನ ಸರ್ಕಾರ ದುರುದ್ದೇಶ ಪೂರ್ವಕವಾಗಿ ಹಿಜಾಬ್ ನಿಷೇಧಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಮೂಲಭೂತ ಹಕ್ಕನ್ನು ಮರುಸ್ಥಾಪಿಸುತ್ತಿದೆ’ ಎಂದು ಹಿಜಾಬ್‌ ಪರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಎಪಿಸಿಆರ್ ಸಂಘಟನೆ ಮುಖ್ಯಸ್ಥ ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳು ಕೇಸರಿಮಯ: ಎಚ್ಚರಿಕೆ

ಉಡುಪಿ/ಮಂಗಳೂರು: ತರಗತಿಗಳಲ್ಲಿ ಹಿಜಾಬ್ ನಿಷೇಧ ರದ್ದುಗೊಳಿಸಿದರೆ ರಾಜ್ಯದ ಶಾಲಾ ಕಾಲೇಜುಗಳು ಕೇಸರಿಮಯವಾಗಲಿವೆ ಎಂದು ವಿಶ್ವ ಹಿಂದೂ ಪರಿಷತ್‌ ಎಚ್ಚರಿಸಿದೆ. ಇದು ವಿದ್ಯಾರ್ಥಿಗಳ ಮಧ್ಯೆ ಸಂಘರ್ಷಕ್ಕೂ ಕಾರಣವಾಗಲಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

‘ಮಾನ್ಯ ಮುಖ್ಯಮಂತ್ರಿಗಳೇ, ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದೆ. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆಯ ವಿಷ ಬೀಜ ಬಿತ್ತಬೇಡಿ’ ಎಂದು ವಿಎಚ್‌ಪಿ ರಾಜ್ಯದ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

‘ತರಗತಿ ಒಳಗೆ ಹಿಜಾಬ್ ಧರಿಸಲು ಅನುಮತಿ ನೀಡುವುದಾದರೆ ಕೇಸರಿ ಶಾಲು ಧರಿಸಿ ಹಿಂದೂ ವಿದ್ಯಾರ್ಥಿಗಳು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಕೇಸರಿ ಶಾಲು ಧರಿಸುವ ಆಯ್ಕೆ, ಸ್ವಾತಂತ್ರ್ಯ ಹಿಂದೂ ವಿದ್ಯಾರ್ಥಿಗಳಿಗೂ ಇದೆ’ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.

‘ರಾಜ್ಯ ಸರ್ಕಾರ ಹಿಜಾಬ್ ನಿಷೇಧ ವಾಪಸ್ ಪಡೆದರೆ ಮತ್ತೆ ಶಿಕ್ಷಣ ವ್ಯವಸ್ಥೆ ಹಾಳುಗೆಡವಿ, ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುವ ಕೆಲಸಕ್ಕೆ ಸರ್ಕಾರ ಮುಂದಾಗಬಾರದು’ ಎಂದು ಉಡುಪಿ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಸಿದ್ದರಾಮಯ್ಯ ನಿರ್ಧಾರದಿಂದ ಸಮಾಜದಲ್ಲಿ ಕ್ಷೋಭೆ: ಸ್ವಾಮೀಜಿ

ಬೆಳಗಾವಿ: ‘ಸರ್ಕಾರವು ಯಾವುದೇ ಒಂದು ಸಮಾಜ ಅಥವಾ ಪಂಗಡಕ್ಕೆ ಸೀಮಿತವಾಗಿ ನಡೆದುಕೊಳ್ಳಬಾರದು. ಕಾಯ್ದೆ–ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು’ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಹಿಜಾಬ್‌ ನಿಷೇಧ ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಮಾಡಬಾರದು. ಇಂಥ ನಿರ್ಧಾರಗಳು ಸಮಾಜದಲ್ಲಿ ಕ್ಷೋಭೆಗೆ ಕಾರಣವಾಗಬಹುದು. ಸಿದ್ದರಾಮಯ್ಯ ಅವರು ಎಲ್ಲರಿಗೂ ಮುಖ್ಯಮಂತ್ರಿ ಆಗಿದ್ದಾರೆ ಹೊರತು ಯಾವುದೇ ಒಂದು ಪಂಗಡಕ್ಕಲ್ಲ’ ಎಂದು ಅವರು ಹೇಳಿದರು.

‘ಈಚೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಹಿಂದೂ ಹೆಣ್ಣುಮಕ್ಕಳ ಕಾಲುಂಗುರ, ಕಿವಿಯೋಲೆ, ತಾಳಿ ತೆಗೆಸಲಾಯಿತು. ಆದರೆ, ಇನ್ನೊಂದು ಪಂಗಡದವರಿಗೆ ಮುಸುಕು ಹಾಕಿಕೊಂಡೇ ತರಗತಿಗೆ ಹೋಗಲು ಬಿಡಲಾಯಿತು. ಸರ್ಕಾರ ಎಲ್ಲರನ್ನೂ ಒಂದೇ ರೀತಿ ಕಾಣಬೇಕು’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್‌ನ ಎರಡನೇ ಅವತಾರ. ಹಿಜಾಬ್ ಧರಿಸಲು ಅವಕಾಶ ನೀಡುವ ಅವರ ತೀರ್ಮಾನ ಮುಸ್ಲಿಂ ತುಷ್ಟೀಕರಣದ ಪರಮಾವಧಿ.
- ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ಹಿಜಾಬ್ ನಿಷೇಧ ಆದೇಶ ಹಿಂಪಡೆ ಯಲು ಸಿದ್ದರಾಮಯ್ಯ ಅವರನ್ನು ಯಾರೂ ಕೇಳಿರಲಿಲ್ಲ. ಕೀಳು ಮಟ್ಟದ ರಾಜಕೀಯ ಬಿಡಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ಮಾಡುತ್ತೇವೆ ‍
-ಪ್ರಮೋದ ಮುತಾಲಿಕ್ ಅಧ್ಯಕ್ಷ, ಶ್ರೀರಾಮ ಸೇನೆ ರಾಷ್ಟ್ರೀಯ ಘಟಕ
ಹಿಂದಿನ ರಾಜ್ಯ ಸರ್ಕಾರ ಕಾಲೇಜುಗಳ ಒಳಗೆ ಹಿಜಾಬ್‌ ನಿಷೇಧಿಸಿತು. ಆದರೆ, ಕಾಂಗ್ರೆಸ್‌ ಸರ್ಕಾರ ಅವುಗಳನ್ನು ಮತ್ತೆ ಜಾರಿಗೆ ತಂದು ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುತ್ತದೆ.
-ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‌ ಸಂಸ್ಥಾಪಕ
ಹಿಜಾಬ್‌ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಹೇಳಿಕೆ ನೀಡ ಬಾರದು ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೂ ಸಿ.ಎಂ ತುಷ್ಟೀಕರಣಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.
-ಮಹೇಶ ಟೆಂಗಿನಕಾಯಿ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.