ಬೆಂಗಳೂರು: 'ಬಾಯಿ ಮುಚ್ಚಿಕೊಂಡಿರಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡುತ್ತಿದ್ದಂತೆ ಸಚಿವರು, ಕಾಂಗ್ರೆಸ್ ಶಾಸಕರು ಬಹಿರಂಗ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಾರೆ.
ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿರುವ ಮಾತು ಸರಿಯಾಗಿಯೇ ಇದೆ. ನೂರಕ್ಕೆ ನೂರು ಸರಿಯಾಗಿದೆ. ಎಲ್ಲರೂ ಅವರ ಮಾತನ್ನು ಪಾಲನೆ ಮಾಡಬೇಕಿದೆ' ಎಂದರು.
'ಶಿಸ್ತಿನಿಂದ ಪಕ್ಷವನ್ನು ಸಂಘಟನೆ ಮಾಡಬೇಕು. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕಿದೆ' ಎಂದಷ್ಟೆ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, 'ಸಿಎಂ, ಡಿಸಿಎಂ ಹೇಳಿದ್ದನ್ನು ಎಐಸಿಸಿ ಅಧ್ಯಕ್ಷರು ಪುನರ್ ಉಚ್ಚಾರ ಮಾಡಿದ್ದಾರೆ ಅಷ್ಟೇ. ಯಾರ ಬಾಯಿಗೂ ಕೂಡ ಬೀಗ ಹಾಕಲು ಆಗಲ್ಲ.ಎಂದರು.
'ನಮ್ಮ ನಮ್ಮ ವಿವೇಚನೆ ಬಳಸಿ ಮಾತಾಡಬೇಕು. ಮಾತಿನಿಂದ ಪಕ್ಷಕ್ಕೆ ಹಾನಿ ಆಗುತ್ತೊ ಎಂದು ನಾವು ಯೋಚನೆ ಮಾಡಬೇಕು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು' ಎಂದರು.
ಅಧಿಕಾರ ಸಿಕ್ಕ ಮೇಲೆ ಯಾವ ಕಾಂಗ್ರೆಸ್ ಪಕ್ಷ? ಎಐಸಿಸಿ ಅಧ್ಯಕ್ಷರ ಯಾರು? ರಾಹುಲ್ ಗಾಂಧಿ ಯಾರು? ಹೈಕಮಾಂಡ್ ಏನು ಮಾಡುತ್ತೇ ಎನ್ನುವುದು ಸರಿಯಲ್ಲ. ಸಿಎಂ, ಡಿಸಿಎಂ, ಖರ್ಗೆ ಸಾಹೇಬ್ರು ಸಂದೇಶ ಕೊಟ್ಟಿದ್ಧಾರೆ. ಆ ಸೂಚನೆ ಮೇರೆಗೆ ನಾವು ಕೆಲಸ ಮಾಡಬೇಕು' ಎಂದರು.
ದಲಿತ ನಾಯಕರ ಔತಣಕೂಟ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್, 'ಔತಣಕೂಟ ಪಾರ್ಟಿ ಅಲ್ಲ ಅದು. ಹಾಗಿದ್ದರೆ ನಾವು ಸೇರಲೇಬಾರದೇ? ರಾಜಕಾರಣಿಗಳು ಸ್ನೇಹಿತರು ಯಾವಾಗಲೂ ಸೇರುತ್ತೇವೆ. ಹೈಕಮಾಂಡ್ ನಾಯಕರು ಸೇರಬೇಡಿ ಎಂದು ಹೇಳಲ್ಲ. ಸಭೆ ಸೇರುವುದರಲ್ಲಿ ತಪ್ಪಿಲ್ಲ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.