ADVERTISEMENT

ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯಗೆ ಬಿಜೆಪಿ ನೋಟಿಸ್‌ 

15 ದಿನಗಳಲ್ಲಿ ಉತ್ತರಿಸುವಂತೆ ಸೂಚನೆ 

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 9:28 IST
Last Updated 31 ಜುಲೈ 2020, 9:28 IST
ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ   

ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ₹ 2ಸಾವಿರ ಕೋಟಿ ಖರೀದಿ ಆಗಿದೆ ಎಂದು ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ನೋಟಿಸ್‌ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಸರ್ಕಾರಕ್ಕೆ 20 ಪತ್ರಗಳನ್ನು ಬರೆದರೂ ಉತ್ತರ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಯಾವ ಅಂಕಿ–ಅಂಶಗಳನ್ನು ಇಟ್ಟುಕೊಂಡು ₹4 ಸಾವಿರ ಕೋಟಿ ಖರ್ಚಾಗಿದೆ, ಅದರಲ್ಲಿ ₹2 ಸಾವಿರ ಕೋಟಿ ಅಕ್ರಮ ಆಗಿದೆ ಎನ್ನುವುದಕ್ಕೆ ಆಧಾರಗಳೇನಿವೆ. ದಾಖಲೆಗಳು ಎಲ್ಲಿವೆ ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ಇಬ್ಬರಿಗೂ ನೋಟಿಸ್ ನೀಡಿದ್ದು, 15 ದಿನಗಳಲ್ಲಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ನೀವು ಕೇಳಿರುವ ಎಲ್ಲ ಮಾಹಿತಿಗಳನ್ನು ನೀಡಲು ಸರ್ಕಾರ ಸಿದ್ಧವಿತ್ತು. ಯಾವುದೇ ಅಕ್ರಮ ನಡೆಯದ ಕಾರಣ, ಹತಾಶರಾಗಿ ಇಬ್ಬರೂ ಸುಳ್ಳುಗಳನ್ನು ಹೇಳುವ ಮೂಲಕ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ’ ಎಂದು ರವಿಕುಮಾರ್‌ ಹೇಳಿದರು.

‘ನೀವು(ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಿದ್ದಾಗ ಬೆಲೆ ಬಾಳುವ ಹ್ಯೂಬ್ಲೊಟ್‌ ವಾಚ್‌ ಹೇಗೆ ಬಂತು ಎಂಬುದರ ಸತ್ಯವನ್ನು ಬಿಚ್ಚಿಟ್ಟಿದ್ದೀರಾ? ನೀವು ಯಾವ ನೈತಿಕತೆ ಇಟ್ಟುಕೊಂಡು ಡಿ.ಕೆ.ಶಿವಕುಮಾರ್ ಜತೆ ಕೂರುತ್ತೀರಿ. ಶಿವಕುಮಾರ್‌ ಅಲ್ಪಾವಧಿಯಲ್ಲಿ ಆಸ್ತಿ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಹೇಗೆ’ ಎಂಬುದನ್ನು ತಿಳಿಸಬೇಕು.

‘ಯಡಿಯೂರಪ್ಪ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಜನರ ಮನ್ನಣೆಗೂ ಪಾತ್ರವಾಗಿದ್ದು, ಈ ಬಗ್ಗೆ ಸಹಿಸದೇ ಹೊಟ್ಟೆ ಉರಿಯಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ರವಿಕುಮಾರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.