ADVERTISEMENT

ನೈಸ್ ಲೂಟಿಯಲ್ಲಿ DK ಬ್ರದರ್ಸ್ ಪಾಲು: ನಾಳೆ ದಾಖಲೆ ಬಿಡುಗಡೆ ಮಾಡ್ತೀನಿ -ಎಚ್‌ಡಿಕೆ

ಡಿಕೆಶಿ ಸಚಿವರಾಗಿದ್ದು ಜಿಲ್ಲೆ ಉದ್ದಾರಕ್ಕೊ ಅಥವಾ ಭೂಮಿ ಲೂಟಿಗೊ ಎಂದು ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 12:46 IST
Last Updated 20 ಆಗಸ್ಟ್ 2023, 12:46 IST
ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ. ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ‘ಡಿ.ಕೆ ಸಹೋದರರು ನೈಸ್ ಸಂಸ್ಥೆ ಹೆಸರಿನಲ್ಲಿ ಕೊಳ್ಳೆ ಹೊಡೆದಿರುವ ರೈತರ ಭೂಮಿ ಹಾಗೂ ನೈಸ್ ಅಕ್ರಮಗಳ ಎಲ್ಲಾ ದಾಖಲೆ ನನ್ನ ಬಳಿ ಇದೆ. ನಾಳೆ ಅಥವಾ ನಾಡಿದ್ದು ಬಹಿರಂಗ ಮಾಡುತ್ತೇನೆ. ಡಿ.ಕೆ. ಸುರೇಶ್ ಸಂಸದರಾಗುವುದಕ್ಕೂ ಮುಂಚೆ ಅವರ ಎಷ್ಟು ಆಸ್ತಿ ಇತ್ತು? ಈಗ ಎಷ್ಟಿದೆ? ಎಂದು ಎಲ್ಲರಿಗೂ ಗೊತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನೈಸ್ ಸಂಸ್ಥೆ ಕುರಿತು ತಮ್ಮ ವಿರುದ್ಧ ಡಿ.ಕೆ. ಸುರೇಶ್ ಹೇಳಿಕೆಗೆ ನಗರದಲ್ಲಿ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘ಡಿ.ಕೆ. ಸುರೇಶ್ ಅಣ್ಣ ಡಿ.ಕೆ. ಶಿವಕುಮಾರ್ ಅವರು 2004ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದು ರಾಮನಗರ ಜಿಲ್ಲೆಯ ಉದ್ಧಾರಕ್ಕೊ ಅಥವಾ ನೈಸ್‌ ಕಂಪನಿ ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯುವುದಕ್ಕೊ?’ ಎಂದು ಟೀಕಿಸಿದರು.

‘ಬೆಂಗಳೂರು ಸುತ್ತ ಉತ್ತಮ ರಸ್ತೆ ನಿರ್ಮಾಣವಾಗಿ, ಜನರಿಗೆ ಅನುಕೂಲವಾಗಲಿ ಎಂದು ದೇವೇಗೌಡರು ನೈಸ್‌ ಯೋಜನೆಗೆ ಒಪ್ಪಿಗೆ ನೀಡಿದರು. ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾ ಖಂಡದಲ್ಲಿಯೇ ಬೆಂಗಳೂರು– ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ಜನರಿಗೆ ಜೀವನೋಪಾಯವಾಗುತ್ತಿತ್ತು. ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘90ರ ದಶಕದಲ್ಲಿ ಜಿಲ್ಲೆಯ ಮಾಯಗಾನಹಳ್ಳಿ ಬಳಿ ಅಪಘಾತ ಸಂಭವಿಸಿ 14 ಶಾಲಾ ಮಕ್ಕಳು ತೀರಿಕೊಂಡಾಗ, ಬೆಂಗಳೂರು-ಮೈಸೂರು ನಡುವೆ ನಾಲ್ಕು ಪಥದ ಹೆದ್ದಾರಿ ಮಾಡಬೇಕು ಎಂದು ದೇವೇಗೌಡರು ತೀರ್ಮಾನಿಸಿದರು. ಹಣದ ಕೊರತೆಯಿಂದಾಗಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಯೋಜನೆ ಆಗಲಿಲ್ಲ. ದೇವೇಗೌಡರು ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ ಚಾಲನೆ ನೀಡಿದರು’ ಎಂದು ತಿಳಿಸಿದರು.

‘ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೆ ಸಾಕ್ಷ್ಯದ ಗುಡ್ಡೆಗಳಿವೆ. ಅವೆಲ್ಲಾ ಕಣ್ಣಿಗೆ ಕಾಣುತ್ತಿವೆ ಎಂದಿದ್ದಾರೆ. ಇವರು ಬೆಟ್ಟಗುಡ್ಡಗಳನ್ನು ಹೊಡೆದು ಚೀನಾಗೆ ಸಾಗಿಸಿದ್ದರ ಬಗ್ಗೆ ಕರಗಿರುವ ಬೆಟ್ಟಗುಡ್ಡಗಳ ಸಾಕ್ಷಿ ಇದೆ. ಅವು ಎಲ್ಲರ ಕಣ್ಣಿಗೂ ಕಾಣುತ್ತಿವೆ. ಜಿಲ್ಲೆಯ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದು ದೇವೇಗೌಡರು. ನೀರಿನ ಯೋಜನೆ ತಂದಿದ್ದು ನಾನು. ಇತರರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ಇನ್ನೊಬ್ಬರು ಮಾಡಿರುವ ಕೆಲಸದ ಬಗ್ಗೆ ಹೇಳುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.