ADVERTISEMENT

ಸಿ.ಪಿ.ಯೋಗೇಶ್ವರ್‌ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ: ಸಾ.ರಾ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 12:17 IST
Last Updated 28 ಫೆಬ್ರುವರಿ 2021, 12:17 IST
ಸಾ.ರಾ.ಮಹೇಶ್ ಹಾಗೂ ಸಿ.ಪಿ. ಯೋಗೇಶ್ವರ್‌
ಸಾ.ರಾ.ಮಹೇಶ್ ಹಾಗೂ ಸಿ.ಪಿ. ಯೋಗೇಶ್ವರ್‌   

ಬೆಂಗಳೂರು: ಸಚಿವ ಸಿ.ಪಿ. ಯೋಗೇಶ್ವರ್‌ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಅವರಿಗೆಮತಿಭ್ರಮಣೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್‌ಗೆ ಅವರ ಹುಟ್ಟೂರಿನಲ್ಲೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.

‘ಹುಟ್ಟೂರಿನಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ? ಮುಂದಿನ ದಿನಗಳಲ್ಲಿ ಎಚ್‌ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ? ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿ.ಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಲಿ’ ಎಂದು ಸಾ.ರಾ.ಮಹೇಶ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಚನ್ನಪಟ್ಟಣದ ಚಕ್ಕೆರೆ 'ಸರ್ವಪಕ್ಷ ಸದಸ್ಯ' ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್‌ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯಿತಿ ಜೆಡಿಎಸ್‌ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬೆಂಬಲಿತ ಅಭ್ಯರ್ಥಿಗಳು ಹೇಳಹೆಸರಿಲ್ಲದೇ ಸೋತಿದ್ದಾರೆ. ಶೇ 80ರಷ್ಟು ಜೆಡಿಎಸ್‌ ಗೆಲುವು ಸಾಧಿಸಿದೆ. ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದನ್ನು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರ್‌ಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಉರಿ ಮಾತು’ ಎಂದು ಉಳಿದೆರಡು ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.

‘ಎಚ್‌.ಡಿ. ಕುಮಾರಸ್ವಾಮಿ ನಂಬಿಕೆಗೆ ಅರ್ಹರಲ್ಲ. ಅವರೊಂದಿಗೆ ಯಾವುದೇ ಹೊಂದಾಣಿಕೆ ಮಾಡುವುದು ಬೇಡ ಎಂದು ಬಿಜೆಪಿ ಹಿರಿಯರಿಗೆ ಮನವಿ ಮಾಡಿದ್ದೇನೆ’ ಎಂಬುದಾಗಿಯೂ ಯೋಗೇಶ್ವರ್ ಹೇಳಿದ್ದರು.

ಯೋಗೇಶ್ವರ್ ವಿರುದ್ಧ ಶರವಣ, ಭೋಜೇಗೌಡ ಆಕ್ರೋಶ

‘ಯೋಗೇಶ್ವರ್‌ ಕುರಿತ ಕುಮಾರಸ್ವಾಮಿ ಅವರ ಮಾತು ಅಕ್ಷರಶಃ ನಿಜ. ಯೋಗೇಶ್ವರ್‌ ರಾಜಕೀಯ ಪ್ರಬುದ್ಧನಲ್ಲ. ಆತನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿಬಂದಿದ್ದಾನೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ, ಸಮಾಜವಾದಿ ಪಕ್ಷಕ್ಕೆ, ನಂತರ ಕಾಂಗ್ರೆಸ್‌ಗೆ, ಬಿಜೆಪಿಗೆ... ಹೀಗೆ ವಿಭಿನ್ನ ಸಿದ್ಧಾಂತದ ಪಕ್ಷಗಳಿಗೆ ಅಧಿಕಾರಕ್ಕಾಗಿ ನೆಗೆದು ಜಿಗಿದ ರಾಜಕೀಯದ ಜೋಕರ್‌ ಯೋಗೇಶ್ವರ್ ಜೆಡಿಎಸ್, ಎಚ್‌ಡಿಕೆ ಬಗ್ಗೆ ಮಾತನಾಡಲು ಅರ್ಹರೇ? ರಾಜಕೀಯದ ಮದಗಜವೆಲ್ಲಿ ಮರ್ಕಟ ಮನಸ್ಥಿತಿಯ ಜೋಕರ್‌ ಎಲ್ಲಿ?’ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.