ADVERTISEMENT

ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ 50ಕ್ಕೆ ಏರಿಕೆ ಮಾಡಲು ಇದು ಸಕಾಲ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 14:53 IST
Last Updated 30 ಮಾರ್ಚ್ 2022, 14:53 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೀಸಲಾತಿ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ‘ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಸುಪ್ರೀಂಕೋರ್ಟ್‌ನ ಮುಂದಿದೆ. ಬೇರೆ ಬೇರೆ ರಾಜ್ಯಗಳು ಕೂಡ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಅವಕಾಶ ಇದೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದ್ದಾರೆ.

‘ತಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸುತ್ತೇನೆ. ಇದನ್ನು ರಕ್ತದಲ್ಲಿ ಬೇಕಾದರೂ ಬರೆದುಕೊಡುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ಈಗ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ADVERTISEMENT

‘3-ಬಿ ಇಂದ 2-ಎ ಗೆ, 2-ಎ ನಲ್ಲಿ ಇದ್ದವರನ್ನು ಎಸ್‌ಟಿಗೆ ಸೇರಿಸಲು ಸುಭಾಷ್ ಅಡಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿ, ವರದಿ ನೀಡುವಂತೆ ಕೇಳಿದೆ. ಈಗಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇರುವಾಗ ಇದು ಸಾಂವಿಧಾನಿಕವೋ? ಇಲ್ಲವೋ? ಎಂಬ ಬಗ್ಗೆ ಗೊಂದಲವಿದೆ’ ಎಂದಿದ್ದಾರೆ.

ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ಬೇಡ. ಇದರ ಬದಲಿಗೆ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡಬೇಕು ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

‘ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದೆ. ರಾಜ್ಯದಲ್ಲಿ ಎಸ್‌ಟಿ ಜನಸಂಖ್ಯೆ ಶೇ 6.95, ಎಸ್‌ಸಿ ಜನಸಂಖ್ಯೆ ಶೇ 17.15 ರಷ್ಟಿದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ 24 ರಷ್ಟು ಮೀಸಲಾತಿ ನೀಡಲು ಸಂವಿಧಾನಬದ್ಧವಾಗಿ ಅವಕಾಶವಿದೆ’ ಎಂದು ವಿವರಿಸಿದ್ದಾರೆ.

‘ಸಂವಿಧಾನದ 15ನೇ ಪರಿಚ್ಛೇದವು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲು ಅವಕಾಶ ನೀಡಿದೆ. ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡಬಹುದು ಎಂದು ಸಂವಿಧಾನದಲ್ಲಿ ಇಲ್ಲದಿದ್ದರೂ ಬಿಜೆಪಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೂ ಮೀಸಲಾತಿ ಸೌಲಭ್ಯ ವಿಸ್ತರಿಸಿಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಮೀಸಲಾತಿ ಪದ್ಧತಿ ಈಗಿಲ್ಲ. ಸಾಮಾನ್ಯ ವರ್ಗದ ಜನರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿ ನೀಡಿರುವುದರಿಂದ ಮೀಸಲಾತಿ ಪ್ರಮಾಣ ಶೇ 60ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.

ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿರುವುದು ನಿಜ. ಆದರೆ, ಹಲವಾರು ಸಂದರ್ಭಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಆ ಮಿತಿಯನ್ನು ಮೀರಿ ಮೀಸಲಾತಿ ನೀಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭಾಷ್ ಅಡಿಯವರ ನೇತೃತ್ವದ ಸಮಿತಿಯ ವರದಿಯನ್ನು ಪಡೆದುಕೊಳ್ಳಲಿ, ಅದರ ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡಲಿ. ಇಲ್ಲದಿದ್ದರೆ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು ಕಳೆದ 49 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕೂತಿದ್ದಾರೆ. ಬಿಜೆಪಿ ಸರ್ಕಾರ ಅವರ ಬೇಡಿಕೆಗಳ ಈಡೇರಿಕೆಗೆ ಮುಕ್ತವಾಗಿದೆ ಎಂದು ಹೇಳಿದರೆ ಸಾಲದು ಅಲ್ಲಿಗೆ ಹೋಗಿ ಧರಣಿ ಕೈಬಿಡುವಂತೆ ಸ್ವಾಮಿಗಳ ಮನವೊಲಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.