ADVERTISEMENT

ಕರಾವಳಿ, ಕೊಡಗಿನಲ್ಲಿ ಭಾರಿ ಮಳೆ: 7 ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಮುಂದುವರಿಕೆ

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ: ಮಂಗಳೂರು ವಿಶ್ವವಿದ್ಯಾಲಯ ಪರೀಕ್ಷೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 19:31 IST
Last Updated 20 ಸೆಪ್ಟೆಂಬರ್ 2020, 19:31 IST
ಬಜ್ಪೆ ಆದ್ಯಪಾಡಿಯಲ್ಲಿ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. -ಪ್ರಜಾವಾಣಿ ಚಿತ್ರ
ಬಜ್ಪೆ ಆದ್ಯಪಾಡಿಯಲ್ಲಿ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. -ಪ್ರಜಾವಾಣಿ ಚಿತ್ರ   
""
""
""

ಬೆಂಗಳೂರು:ರಾಜ್ಯದ ಕರಾವಳಿ, ಮಲೆ ನಾಡು ಹಾಗೂ ಕೊಡಗು ಭಾಗದಲ್ಲಿ ಭಾನುವಾರ ಭಾರಿ ಮಳೆ ಆಗಿದೆ. ಹಳ್ಳ–ಕೊಳ್ಳಗಳು ಭರ್ತಿಯಾಗಿವೆ. ನದಿ ಪಾತ್ರಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಹಲವೆಡೆ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಬಂದ್‌ ಆಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ ದಶಕಗಳಲ್ಲಿ ಕಂಡರಿಯದ ನೆರೆ ಬಂದಿದೆ. ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಹೆಚ್ಚಿನ ಗ್ರಾಮಗಳು ಜಲಾವೃತಗೊಂಡಿದ್ದು, ಶನಿವಾರ ಮಧ್ಯರಾತ್ರಿ ಅಗ್ನಿಶಾಮಕ ಸಿಬ್ಬಂದಿ, ಕೋಸ್ಟ್‌ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಬಂದ ಎನ್‌ಡಿಆರ್‌ಎಫ್‌ ತಂಡ, ನೆರೆಯಲ್ಲಿ ಸಿಲುಕಿದ್ದ 785 ಕುಟುಂಬಗಳ 2,874 ಜನರನ್ನು ರಕ್ಷಿಸಿದೆ. ಜಿಲ್ಲೆಯಲ್ಲಿ 1,201 ಜನರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಉಡುಪಿ– ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 169 ‘ಎ’ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್‌ ಆಗಿತ್ತು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿವೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟಿಸುತ್ತಿದೆ. ಸರಿಪಳ್ಳದಲ್ಲಿ ಮನೆ ಕುಸಿದು ಇಬ್ಬರಿಗೆ ಗಾಯವಾಗಿದೆ. ವಿಟ್ಲ ಸಮೀಪದ ಬನಾರಿ ಬಾಬಟ ಪ್ರದೇಶ ದಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾ ಗಿದ್ದು, ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮಂಗಳೂರು ತಾಲ್ಲೂಕಿನ ಮರವೂರಿನಲ್ಲಿ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. -ಪ್ರಜಾವಾಣಿ ಚಿತ್ರ

ಮೂಲ್ಕಿ-ಬಳ್ಕುಂಜೆ ಮಾರ್ಗದಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿಯ ಮೂಲಕ ಜನರನ್ನು ರಕ್ಷಿಸಿದ್ದಾರೆ. ಪಡೀಲ್‌ ಬಳಿ ಬೈಪಾಸ್‌ ರೈಲ್ವೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ರಸ್ತೆ ಸಂಚಾರ ಬಂದ್‌:ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ– ಕಾರ್ಕಳ, ಕಳಸ– ಹೊರನಾಡು ಹಾಗೂ ಕುದುರೆಮುಖ– ಕಾರ್ಕಳ ಮಾರ್ಗದಲ್ಲಿ ಸಂಚಾರ ಬಂದ್‌ ಆಗಿದೆ. ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಕ್ವಾಲಿಸ್‌ ಕಾರು ಹಳ್ಳಕ್ಕೆ ಉರುಳಿದ್ದು, ಕಾರಿನಲ್ಲಿದ್ದ ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪರೀಕ್ಷೆ ಮುಂದಕ್ಕೆ: ಸ್ನಾತಕೋತ್ತರ ಹಾಗೂ ಪದವಿಯ ಅಂತಿಮ ಸೆಮಿಸ್ಟರ್‌ ಪರೀಕ್ಷೆಯನ್ನು ಮಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ ಎಂದು ಕುಲಸಚಿವ ಡಾ.ಪಿ.ಎಲ್. ಧರ್ಮ ತಿಳಿಸಿದ್ದಾರೆ.

ಧಾರಾಕಾರ ಮಳೆ:ಕೊಡಗು ಜಿಲ್ಲೆ ಯಲ್ಲೂ ಮಳೆಯ ಅಬ್ಬರ ಮುಂದು ವರಿದಿದೆ. ಭಾಗಮಂಡಲ ಮತ್ತೆ ಜಲಾವೃತಗೊಂಡಿದೆ.ಕೇರಳದಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಭದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್‌ ನೀರು ಬಿಡು ಗಡೆ:ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚಿದೆ. ಭಾನುವಾರ 60 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ವಾಹನ ಸಂಚಾರ ಬಂದ್:ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಭದ್ರಾವತಿಯ ಹೊಸ ಸೇತುವೆ ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಶಿವಮೊಗ್ಗದ ಹಲವೆಡೆ ಸಾಧಾರಣ ಮಳೆಯಾಗಿದೆ.ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ.ತಾಲ್ಲೂಕಿನ ಕೆಲವೆಡೆ ಧರೆ ಕುಸಿತದ ಭೀತಿ ಎದುರಾಗಿದೆ.ಉತ್ತರ ಕನ್ನಡ, ಬೆಳಗಾವಿ,ಕಲಬುರ್ಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ಬೈಕ್‌ ಸವಾರ ನೀರುಪಾಲು
ಆಳಂದ (ಕಲಬುರ್ಗಿ ಜಿಲ್ಲೆ):
ತುಂಬಿ ಹರಿಯುತ್ತಿದ್ದ ಹಳ್ಳವನ್ನು ಬೈಕ್‌ನಲ್ಲಿ ದಾಟಲು ಯತ್ನಿಸಿದ ತಾಲ್ಲೂಕಿನ ಶ್ರೀಚಂದ ಗ್ರಾಮದ ಬೀರಶೆಟ್ಟಿ ಹಣಮಂತ ಬೋಧನವಾಡಿ (28) ಎಂಬುವರು ನೀರಿನ ರಭಸಕ್ಕೆ ಭಾನುವಾರ ಸಂಜೆ ಕೊಚ್ಚಿಕೊಂಡು ಹೋಗಿದ್ದಾರೆ.ಅವರ ಪತ್ತೆಗಾಗಿ ನಿಂಬರ್ಗಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಯುವಕನ ರಕ್ಷಣೆ (ಬೆಳಗಾವಿ ವರದಿ):ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಹತ್ತಿರ ಹಳ್ಳದಲ್ಲಿ ಬೈಕ್‌ ಸಮೇತ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಮಾನವ ಸರಪಳಿ ರಚಿಸಿ ರಕ್ಷಿಸಿದ್ದಾರೆ.

ಉಡುಪಿ ನಗರದಲ್ಲಿ ನೆರೆಗೆ ಸಿಲುಕಿದವರನ್ನು ಬೋಟ್‌ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ದೃಶ್ಯ.

ರಕ್ಷಣೆಗೆ ಸೇನಾ ಹೆಲಿಕಾಪ್ಟರ್ ನೆರವು: ಬೊಮ್ಮಾಯಿ
ಉಡುಪಿ:
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಜನರ ರಕ್ಷಣೆಗೆ ಸೇನಾ ಹೆಲಿಕಾಪ್ಟರ್‌ ನೀಡುವಂತೆ ಕೋರಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ರಾಜ್ಯದ ಎಸ್‌ಡಿಆರ್‌ಎಫ್ ತಂಡದ 250 ಸದಸ್ಯರನ್ನು ತಡರಾತ್ರಿಯೇ ಸ್ಥಳಕ್ಕೆ ಕಳುಹಿಸಿದ್ದು, 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್‌ ತಂಡ ಕೂಡ ಸ್ಥಳಕ್ಕೆ ತಲುಪಲಿದೆ’ ಎಂದು ಹೇಳಿದ್ದಾರೆ.

7 ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಮುಂದುವರಿಕೆ
ಬೆಂಗಳೂರು:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ಸೆ.21 ರವರೆಗೆ ‘ರೆಡ್ ಅಲರ್ಟ್’ ಮುಂದುವರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆ.23 ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ತಿರುವಂತಪುರ ವರದಿ: ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.