ಬೆಂಗಳೂರು: ರಾಜ್ಯದ ಕೊಡಗು, ಹಾಸನ, ಬೆಳಗಾವಿ ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದೆ.
ಭಾರಿ ಮಳೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಕೆಲವೆಡೆ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆ, ದೇವಸ್ಥಾನಗಳು ಮುಳುಗಡೆಯಾಗಿವೆ. ಮನೆಗಳು ಕುಸಿದಿವೆ. ಬೀದರ್, ಬಳ್ಳಾರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆ ನಷ್ಟವಾಗಿದೆ.
ಶಿವಮೊಗ್ಗ ಜಿಲ್ಲೆಯ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಮಂಗಳವಾರ ಶರಾವತಿ ನದಿಗೆ 15,000 ಕ್ಯೂಸೆಕ್ ನೀರು ಹರಿಸಲಾಗಿದೆ. ಜೋಗ ಜಲಪಾತವು ಮೈದುಂಬಿ ಕಳೆಗಟ್ಟಿದೆ.
ಕಲಬುರ್ಗಿ ವರದಿ: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಂಗಳವಾರವೂ ಭಾರಿ ಮಳೆಯಾಗಿದ್ದು, ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಿದೆ. ಯಳಗುಂದಿ, ಹಂಚಿನಾಳ, ಕಡದರಗಡ್ಡಿ, ಯರಗೋಡಿ ಗ್ರಾಮಗಳ ನೇರ ಸಂಪರ್ಕ ಕಡಿದು ಹೋಗಿದೆ.
ಮೈಸೂರು ವರದಿ: ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆ ನಿಯಂತ್ರಣಕ್ಕೆ ಬಂದರೂ ನದಿ, ತೊರೆಗಳು ಭೋರ್ಗರೆಯುತ್ತಿವೆ. ಕೊಡಗಿನ ದುಬಾರೆಯಲ್ಲಿ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.