
ಬೆಂಗಳೂರು: ‘ಭೂ ಹವಾಮಾನ ವಿಜ್ಞಾನದ ಪ‍್ರಕಾರ ರಾಜ್ಯದಲ್ಲಿ ಈ ಬಾರಿಯೂ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ’ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಎಚ್.ಎಸ್.ಎಂ. ಪ್ರಕಾಶ್ ತಿಳಿಸಿದ್ದಾರೆ.
ಮುಂಗಾರು ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್ ತಿಂಗಳಲ್ಲಿ ಕಳೆದ ಬಾರಿಯ ಸ್ಥಿತಿಯೇ ಇರಲಿದೆ. ಹಿಂಗಾರಿನ ಬಗ್ಗೆ 2024ರ ಅಕ್ಟೋಬರ್ ಮೊದಲ ವಾರದಲ್ಲಿ ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ಭಾರತದ ಸುತ್ತಮುತ್ತಲ ಭೂ ಪ್ರದೇಶದ ಮೇಲಿರುವ ಅಥವಾ ಸಮುದ್ರದ ಒಳಗಿರುವ ಹಲವಾರು ದೊಡ್ಡ ಜ್ವಾಲಾಮುಖಿಗಳು ನಿಷ್ಕ್ರಿಯ ಆಗಿರುವುದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. ಈ ಜ್ವಾಲಾಮುಖಿಗಳು ಮುಂದಿನ ತಿಂಗಳುಗಳಲ್ಲಿ ಸಕ್ರಿಯವಾಗುವ ಯಾವ ಮುನ್ಸೂಚನೆಗಳೂ ಕಂಡುಬಂದಿಲ್ಲ. ಮುಂಗಾರಿನ ಕೊರತೆಗೆ ಇದೇ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ, ಕೊಡಗು ಮತ್ತು ಕೇರಳದಲ್ಲಿ ಪ್ರವಾಹ ಮತ್ತು ಭೂಕುಸಿತ ಪ್ರಕರಣಗಳ ಸಾಧ್ಯತೆ ಕಡಿಮೆಯಿದೆ. 2018 ಮತ್ತು 2019ರ ದುರಂತ ಪರಿಸ್ಥಿತಿಯ ರೀತಿ ಘಟನೆಗಳು ನಡೆಯುವುದಿಲ್ಲ. ಮಳೆಯ ಕೊರತೆಯಿಂದಾಗಿ 2025ರ ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.