ADVERTISEMENT

ಜೆಡಿಎಸ್‌ ಅಭ್ಯರ್ಥಿ ನಿವೃತ್ತಗೊಳಿಸಿ ಬೆಂಬಲಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 8:25 IST
Last Updated 9 ಜೂನ್ 2022, 8:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್‌ನವರು ಕೊನೆ ಗಳಿಗೆಯಲ್ಲಿ ತಮ್ಮ ಅಭ್ಯರ್ಥಿಯನ್ನು ನಿವೃತ್ತಗೊಳಿಸಿ ನಮಗೆ ಬೆಂಬಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಅವರಿಗೆ (ಜೆಡಿಎಸ್‌) ಜಾತ್ಯತೀತ ತತ್ವದಲ್ಲಿ ನಿಜವಾಗಿ ನಂಬಿಕೆ ಇದ್ದರೆ, ಜಾತ್ಯತೀತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದಿದ್ದರೆ ನಮಗೆ ಬೆಂಬಲ ಕೊಡಲಿ’ ಎಂದೂ ಹೇಳಿದರು.

‘ಹಲವು ಶಾಸಕರು ಜೆಡಿಎಸ್‌ ತ್ಯಜಿಸುತ್ತಿದ್ದಾರೆ. 45 ಮತಗಳು ಅಲ್ಲದೆ ನಮ್ಮ ಬಳಿ 26 ಹೆಚ್ಚುವರಿ ಮತಗಳು ಇವೆ. ಜೈರಾಮ್‌ ರಮೇಶ್‌ಗೆ ಹಾಕುವ ಎಲ್ಲ ಮತಗಳು ಮನ್ಸೂರ್‌ ಅಲಿ ಖಾನ್‌ಗೆ ಎರಡನೇ ಪ್ರಾಶಸ್ತ್ಯದ ಮತಗಳಾಗಿ ಹಾಕುತ್ತೇವೆ. ಅವುಗಳ ಜೊತೆಗೆ ನಮಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ. ಜೆಡಿಎಸ್‌ ಮತ್ತು ಬಿಜೆಪಿ ಎರಡೂ ಕಡೆಯ ಈ ಮತಗಳು ನಮಗೆ ಬೀಳಲಿದೆ’ ಎಂದರು.

‘ಕೋಮುವಾದಿ ಪಕ್ಷ ಗೆಲ್ಲಬಾರದು ಎಂಬುದು ಜೆಡಿಸ್‌ ನ ಉದ್ದೇಶವಾಗಿದ್ದರೆ, ಒಂದು ದಿನ ಮುಂಚಿತವಾಗಿ ನಾಮಪತ್ರ ಸಲ್ಲಿಸಿದ್ದು ನಾವು. 24 ಗಂಟೆಗಳ ನಂತರ ಜೆಡಿಎಸ್ ನವರು ನಾಮಪತ್ರ ಹಾಕಿದ್ದಾರೆ. ಈ ರೀತಿ ನಾಮಪತ್ರ ಹಾಕಬಾರದಿತ್ತು ಅಲ್ಲವೇ? ದೇವೇಗೌಡರು ರಾಜ್ಯ ಸಭೆಗೆ ಸ್ಪರ್ಧೆ ಮಾಡಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. 37 ಜನ ಶಾಸಕರನ್ನು ಹೊಂದಿದ್ದ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು ನಾವು. ದೇವೇಗೌಡರಿಗೆ ನಾವು ಬೆಂಬಲಿಸಿದ್ದರಿಂದ ಪ್ರಧಾನಿಯಾದರು. ಹೀಗಾಗಿ ಈಗ ಜೆಡಿಎಸ್‌ನವರು ನಮಗೆ ಸಹಾಯ ಮಾಡಬೇಕೋ ಬೇಡ್ವೋ? ಒಬ್ಬ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೇವೆ, ಆತ ಸಜ್ಜನ, ಪ್ರಗತಿಪರ ಚಿಂತನೆ ಇರುವ, ಜಾತ್ಯತೀತತೆಯಲ್ಲಿ ಬದ್ಧತೆ ಇರುವ ವ್ಯಕ್ತಿ. ಜೆಡಿಎಸ್‌ ಗೆ ನಿಜವಾಗಿ ಬಿಜೆಪಿ ಬರಬಾರದು ಎಂದು ಇದ್ದರೆ ನಮ್ಮ ಅಭ್ಯರ್ಥಿಗೆ ಬೆಂಬಲಿಸಲಿ’ ಎಂದರು.

‘ಜೆಡಿಎಸ್‌ ನವರು ನಮ್ಮ ಜೊತೆ ಅಧಿಕೃತ ಮಾತುಕತೆ ನಡೆಸಿದ್ದಾರಾ? ನಾವು ಮೊದಲು ಅಭ್ಯರ್ಥಿ ಇಳಿಸಿದ್ದು, ಯಾರ ಪರ ನ್ಯಾಯ ಇದೆ? ಜೆಡಿಎಸ್‌ ಗಿಂತ ಒಂದು ದಿನ ಮುಂಚಿತವಾಗಿ ನಾವು ನಾಮಪತ್ರ ಹಾಕಿದ್ದು. ದೇವೇಗೌಡರು ರಾಜ್ಯಸಭೆಗೆ ನಾಮಪತ್ರ ಹಾಕಿದ್ದಾಗ, ಅವರು ಮಾಜಿ ಪ್ರಧಾನಿಗಳು, ರಾಜ್ಯಸಭೆಗೆ ಹೋಗಬೇಕು ಎಂದು ನಾವು ನಾಮಪತ್ರ ಹಾಕಿಲ್ಲ. ಈ ಹಿಂದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್‌ ಬಳಿ ನಾವು ಹೋಗಿದ್ದು ನಿಜ. ನಮ್ಮಲ್ಲಿ 80 ಜನ ಶಾಸಕರಿದ್ದರು. 37 ಜನ ಶಾಸಕರಿದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿಲ್ಲವೇ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.