ADVERTISEMENT

ವಿಷ್ಣು, ಸರೋಜಾದೇವಿಗೆ ‘ಕರ್ನಾಟಕ ರತ್ನ’: ಡಿಸಿಎಂಗೆ ಕೃತಜ್ಞತೆ ಸಲ್ಲಿಸಿದ ನಟಿಯರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 10:34 IST
Last Updated 12 ಸೆಪ್ಟೆಂಬರ್ 2025, 10:34 IST
<div class="paragraphs"><p>ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಟಿಯರು</p></div>

ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಟಿಯರು

   

(ಎಕ್ಸ್‌ ಚಿತ್ರ)

ಬೆಂಗಳೂರು: ಚಲನಚಿತ್ರ ನಟ ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ನಟಿಯರ ಭೇಟಿ ಬೆನಲ್ಲೇ, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಸಿಎಂ. 'ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರಾದ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ರಾಜ್ಯ ಸರ್ಕಾರವು ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಇಂದು ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಅವರು ನನ್ನನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿದರು' ಎಂದು ಬರೆದುಕೊಂಡಿದ್ದಾರೆ.

‘ವಿಷ್ಣುವರ್ಧನ್ ಅವರು ಕನ್ನಡದ ಮೇರುನಟರ ಪೈಕಿ ಒಬ್ಬರು. ಇವರಿಗೆ ಕರ್ನಾಟಕ ರತ್ನ ನೀಡಬೇಕು’ ಎಂದು ವಿಷ್ಣುವರ್ಧನ್ ಕುಟುಂಬ, ಅಭಿಮಾನಿಗಳ ಸಂಘ ಮತ್ತು ಚಲನಚಿತ್ರ ಕಲಾವಿದರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಭಿಮಾನ್‌ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇತ್ತೀಚೆಗೆ ರಾತ್ರೋರಾತ್ರಿ ನೆಲಸಮ ಮಾಡಿದ್ದರಿಂದ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಮೀನು ನೀಡಬೇಕು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು.

ಅಲ್ಲದೇ, ನಟಿಯರಾದ ಜಯಮಾಲಾ, ಶ್ರುತಿ, ತಾರಾ ಅನೂರಾಧ, ಮಾಳವಿಕಾ ಅವಿನಾಶ್ ಅವರು ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ನೀಡುವ ತೀರ್ಮಾನ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.