ADVERTISEMENT

ಅಡಕತ್ತರಿಯಲ್ಲಿ 56% ಮೀಸಲು|ವಿವಿಧ ಹುದ್ದೆ ನೇಮಕಾತಿಗೆ ಅಡ್ಡಿ: ಸರ್ಕಾರಕ್ಕೆ ಸವಾಲು

ರಾಜೇಶ್ ರೈ ಚಟ್ಲ
Published 19 ಅಕ್ಟೋಬರ್ 2025, 22:59 IST
Last Updated 19 ಅಕ್ಟೋಬರ್ 2025, 22:59 IST
<div class="paragraphs"><p>ಮೀಸಲಾತಿ (ಸಾಂಕೇತಿಕ ಚಿತ್ರ)</p></div>

ಮೀಸಲಾತಿ (ಸಾಂಕೇತಿಕ ಚಿತ್ರ)

   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಾರಣಕ್ಕೆ ಸ್ಥಗಿತ ಗೊಂಡಿದ್ದ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದರೂ ಜಾತಿವಾರು ಒಟ್ಟು ಮೀಸಲಾತಿ ಪ್ರಮಾಣವನ್ನು ಈ ಹಿಂದೆ ಶೇ 50ರಿಂದ ಶೇ 56ಕ್ಕೆ ಹೆಚ್ಚಿಸಿರುವುದನ್ನು ‘ಕಾನೂನು’ ಪ್ರಕಾರ ಸಮರ್ಥಿಸಿಕೊಳ್ಳಬೇಕಾದ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ.

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಶೇ 56 ಮೀಸಲಾತಿ ಅನ್ವಯಿಸಿ ಈ ಹುದ್ದೆಗಳ ವರ್ಗೀಕರಣವನ್ನು ಮತ್ತು ಶೇ 56 ಮೀಸಲಾತಿ ಅನ್ವಯಿಸಿ ರೋಸ್ಟರ್‌ ಪರಿಷ್ಕರಿಸಿ ಸರ್ಕಾರ 2022ರ ಡಿ. 28ರಂದು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) 2025ರ ಮೇ 28ರಂದು ರದ್ದುಪಡಿಸಿದೆ. 

ADVERTISEMENT

ವಿವಿಧ ಪ್ರವರ್ಗಗಳಿಗೆ ಒಟ್ಟು ಶೇ 56 ಮೀಸಲಾತಿಯನ್ನು ಅನ್ವಯಿಸಿ, 100 ಬಿಂದುಗಳ ರೋಸ್ಟರ್‌ ಪರಿಷ್ಕರಿಸಿ (100 ಹುದ್ದೆಗಳಲ್ಲಿ ಎಷ್ಟನೇ ಹುದ್ದೆ ಯಾವ ಜಾತಿಗೆ ಮೀಸಲು ಎಂಬ ಪಟ್ಟಿ) 2022ರ ಡಿಸೆಂಬರ್‌ 28ರಂದು ಸರ್ಕಾರ ಹೊರಡಿಸಿದ್ದ ಆದೇಶದಂತೆ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುತ್ತಿತ್ತು.
ಈ ಆದೇಶವನ್ನೇ ಕೆಎಟಿ ರದ್ದುಪಡಿಸಿರುವ ಕಾರಣ, ಕಳೆದ ಎರಡು ವರ್ಷಗಳಿಂದ ಕೆಪಿಎಸ್‌ಸಿ ನಡೆಸಿರುವ ವಿವಿಧ ಹಂತದಲ್ಲಿರುವ ನೇಮಕಾತಿ ಪ್ರಕ್ರಿಯೆ ಮತ್ತು ಅಂತಿಮ ಆಯ್ಕೆ ಪಟ್ಟಿ ಸಿದ್ಧಗೊಂಡಿರುವ ಅಧಿಸೂಚನೆಗಳು ಅಡಕತ್ತರಿಗೆ ಸಿಲುಕಿವೆ.

ಕೆಎಟಿ ಆದೇಶದ ಪರಿಣಾಮವನ್ನು ಅರಿತ ಸರ್ಕಾರ, ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಜುಲೈ 31ರಂದು ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು ಕೆಪಿಎಸ್‌ಸಿ ಮುಂದುವರಿಸಬಹುದು. ಆದರೆ, ಕೋರ್ಟ್‌ ಅನುಮತಿ ಇಲ್ಲದೆ ಆಯ್ಕೆ ಫಲಿತಾಂಶ ಪ್ರಕಟಿಸಬಾರದು’ ಎಂದು ಮಧ್ಯಂತರ ಆದೇಶ ನೀಡಿತ್ತು.

ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಿರುವ ಕ್ರಮವು ಕಾನೂನುಬದ್ಧವೇ ಎಂಬುದು ಇತ್ಯರ್ಥ ಆಗುವವರೆಗೆ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿಲ್ಲ. ಪ್ರಕರಣದ ಮುಂದಿನ ವಿಚಾರಣೆ ನ. 4ರಂದು ನಿಗದಿಯಾಗಿದೆ.

1995 ಜ. 31ರ ಸರ್ಕಾರದ ಆದೇಶದ ಅನ್ವಯ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಸಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೇರ ನೇಮಕಾತಿಯಲ್ಲಿ ಶೇ 50 (ಪ್ರವರ್ಗ 1– ಶೇ 4, 2ಎ– ಶೇ 15, 2ಬಿ– ಶೇ 4, 3ಎ– ಶೇ 4, 3ಬಿ– ಶೇ 5, ಎಸ್‌ಸಿ– ಶೇ 15, ಎಸ್‌ಟಿ– ಶೇ3) ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿತ್ತು.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಆ ಸಮುದಾಯಗಳ ಬೇಡಿಕೆ ಬಂದ ನಂತರದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು.

ಈ ಆಯೋಗದ ಶಿಫಾರಸು ಆಧರಿಸಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ, ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ 2022’ ಅನ್ನು ರೂಪಿಸಿ ಎಸ್‌ಸಿ ಮೀಸಲಾತಿ ಶೇ 15ರಿಂದ 17, ಎಸ್‌ಟಿ ಮೀಸಲಾತಿ ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಹೀಗಾಗಿ, ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣವು ಶೇ 50ರಿಂದ ಶೇ 56ಕ್ಕೆ ಹೆಚ್ಚಳವಾಗಿದೆ. ಅದಕ್ಕೆ ಪೂರಕವಾಗಿ 100 ಬಿಂದುಗಳ ರೋಸ್ಟರ್‌ ಅನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಆಧರಿಸಿ ಕೆಪಿಎಸ್‌ಸಿ 384 ಗ್ರೂಪ್‌ ‘ಎ’ ಮತ್ತು ‘ಬಿ’ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರು ಇದನ್ನು ಕೆಎಟಿಯಲ್ಲಿ ಪ್ರಶ್ನಿಸಿದ್ದರು.

‘ತಾಂತ್ರಿಕ ಕಾರಣಕ್ಕೆ ಆದೇಶ ರದ್ದು’
ಮೀಸಲಾತಿ ಹೆಚ್ಚಿಸಲು ರೂಪಿಸಿರುವ ಕಾಯ್ದೆಯನ್ನು ಕೆಎಟಿ ವಜಾ ಮಾಡಿಲ್ಲ. ಮೀಸಲು ಅನ್ವಯಿಸಿ ರೋಸ್ಟರ್‌ ಪರಿಷ್ಕರಿಸಿ ಹೊರಡಿಸಿದ್ದ ಆದೇಶವನ್ನು ಕೆಲವು ತಾಂತ್ರಿಕ ಕಾರಣಗಳಿಗೆ ಕೆಎಟಿ ರದ್ದು ಮಾಡಿದೆ. ಸುಗ್ರೀವಾಜ್ಞೆಯ ಮೇಲೆ ಈ ಆದೇಶ ಹೊರಡಿಸಲಾಗಿದೆ. ಕಾಯ್ದೆ ಮಾಡಿದ ನಂತರ ಆದೇಶವನ್ನು ಬದಲಾಯಿಸಬೇಕಿತ್ತು ಎನ್ನುವುದು ವಾದ. ಸುಗ್ರೀವಾಜ್ಞೆ ಜಾರಿಗೆ ಬಂದ ದಿನದಿಂದ ಆ ಆದೇಶವೂ ಜಾರಿಗೆ ಬರುತ್ತದೆ ಎಂದು ಕಾಯ್ದೆಯಲ್ಲಿದೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುವುದು.   –ಕೆ.ಜಿ. ಜಗದೀಶ್, ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

ಮೀಸಲು ಹೆಚ್ಚಳ: ವಾದ– ಪ್ರತಿ ವಾದವೇನು?

ರಾಜ್ಯ ಸರ್ಕಾರ 2022ರ ಅ. 23ರಂದು ಸುಗ್ರೀವಾಜ್ಞೆ ಹೊರಡಿಸಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲು ಹೆಚ್ಚಿಸಿದ್ದರಿಂದ ಒಟ್ಟು ಮೀಸಲು ಪ್ರಮಾಣ ಶೇ 50ರಿಂದ ಶೇ 56ಕ್ಕೆ ಹೆಚ್ಚಳವಾಗಿದೆ. ಇದರ ಆಧಾರದಡಿ ಕರ್ನಾಟಕ ಸರ್ಕಾರಿ ಸೇವೆಯಲ್ಲಿ ರೋಸ್ಟರ್‌ ಮೀಸಲು ನಿಗದಿಪಡಿಸಲಾಗಿದೆ. ಇದನ್ನು ಆಧರಿಸಿ ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ 44ರಷ್ಟು ಮಾತ್ರವೇ ಅವಕಾಶ ಲಭಿಸುತ್ತದೆ. ಈ ವರ್ಗಕ್ಕೆ ಸಂವಿಧಾನಬದ್ಧವಾಗಿ ಸಿಗಬೇಕಾದ ಅವಕಾಶವನ್ನು ಈ ಮೂಲಕ ಕಸಿದುಕೊಳ್ಳಲಾಗಿದೆ. ಇದು ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಆದೇಶದ ಸ್ಪಷ್ಟ ಉಲ್ಲಂಘನೆ’ ಎನ್ನುವುದು ಹೈಕೋರ್ಟ್‌ನಲ್ಲಿ ಅರ್ಜಿದಾರ ಚನ್ನಪಟ್ಟಣದ ಬಿ.ಎನ್‌. ಮಧು ಪರ ವಕೀಲರ ವಾದ.

‘ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಆಯೋಗದ ಶಿಫಾರಸಿನಂತೆ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಖಚಿತಪಡಿಸಿಕೊಂಡು ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆಯೋಗವು ವೈಜ್ಞಾನಿಕ ವರದಿ ನೀಡಿದ್ದು, ಹಲವು ರಾಜ್ಯಗಳು ಈಗಾಗಲೇ ಜಾರಿಗೊಳಿಸಿದ ಮಾದರಿಯಲ್ಲಿ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಪ್ರಮಾಣ ವಿಸ್ತರಿಸಲಾಗಿದೆ. ಆದ್ದರಿಂದ, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಶಾಸನಸಭೆ ರೂಪಿಸಿದ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಮಾನ್ಯತೆ ಇಲ್ಲ’ ಎನ್ನುವುದು ರಾಜ್ಯ ಸರ್ಕಾರ ಪ್ರತಿವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.