ನದಿ ಹರಿಯುತ್ತಿರುವ ದೃಶ್ಯ
ನವದೆಹಲಿ: ಕರ್ನಾಟಕದ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಚೆ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿರುವುದರಿಂದ 12 ನದಿಗಳು ಕಲುಷಿತಗೊಂಡಿವೆ.
ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ರಾಜ್ಯದ ನದಿಗಳು ಮಲಿನಗೊಂಡಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಎನ್‌ಜಿಟಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಿತವಾಗಿ ಪ್ರಗತಿ ವರದಿ ಸಲ್ಲಿಸುತ್ತಿದೆ.
ಇದೀಗ ಗಂಗಾ ಮಾಲಿನ್ಯದ ರಾಷ್ಟ್ರೀಯ ಮಿಷನ್‌ನ ಕೇಂದ್ರ ಮೇಲ್ವಿಚಾರಣಾ ಸಮಿತಿಗೆ ಪತ್ರ ಬರೆದಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ‘ಮಲಿನ ನದಿಗಳ ಪಟ್ಟಿಯಲ್ಲಿದ್ದ ಅಘನಾಶಿನಿ, ದಕ್ಷಿಣ ಪಿನಾಕಿನಿ, ಶರಾವತಿ ಹಾಗೂ ಗಂಗಾವಳಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಮಲಿನ ನದಿಗಳ ಪಟ್ಟಿಯಿಂದ ಕೈಬಿಡಬೇಕು’ ಎಂದು ಕೋರಿದ್ದಾರೆ. ಜತೆಗೆ, ಎನ್‌ಜಿಟಿಗೂ ವರದಿ ಸಲ್ಲಿಸಿದ್ದಾರೆ.
ನದಿಗಳ ಮಾಲಿನ್ಯ ಕಡಿಮೆ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಈ ಕೆಲಸ ಪ್ರಗತಿಯಲ್ಲಿದೆ. ಕ್ರಿಯಾಯೋಜನೆ ಸಿದ್ಧಗೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.