ADVERTISEMENT

ಪರಿಶಿಷ್ಟರಿಗೆ ಬಡ್ತಿ: ಸಿಎಂಗೆ ಖರ್ಗೆ ಪತ್ರ

ಒಂಬತ್ತು ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ಸಿಬ್ಬಂದಿಗೆ ಮುಂಬಡ್ತಿಯಲ್ಲಿ ವಂಚನೆ: ನೌಕರರ ಸಂಘದಿಂದ ದೂರು

ರಾಜೇಶ್ ರೈ ಚಟ್ಲ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ಸಿದ್ದರಾಮಯ್ಯ,&nbsp;ಮಲ್ಲಿಕಾರ್ಜುನ ಖರ್ಗೆ&nbsp;</p></div>

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ 

   

(ಸಂಗ್ರಹ ಚಿತ್ರ)

ಬೆಂಗಳೂರು: ‘ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳ (ಎಸ್‌ಟಿ) ಅಧಿಕಾರಿ, ನೌಕರರಿಗೆ ಮುಂಬಡ್ತಿ ನೀಡುವ ವಿಷಯದಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ.

ADVERTISEMENT

ಮುಖ್ಯಮಂತ್ರಿಗೆ ಪತ್ರ ಬರೆದಿರುವ ಖರ್ಗೆ ಅವರು, ‘ಮುಂಬಡ್ತಿ ನೀಡುವಾಗ ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯವಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಹೊರಡಿಸುವ ಆದೇಶಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡದೇ ಇದ್ದರೆ, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಧಿಕಾರಿಗಳ ಮಟ್ಟದಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕೆಲಸಗಳು ಸುಲಲಿತವಾಗಿ ನಡೆಯಲು ಕಷ್ಟ ಆಗಲಿದೆ. ಈ ವಿಚಾರದಲ್ಲಿ ತಕ್ಷಣ ಗಮನಹರಿಸಿ ಬಂದಿರುವ ತೊಡಕುಗಳನ್ನು ನಿವಾರಣೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ವಿವಿಧ ಒಂಬತ್ತು ಇಲಾಖೆಗಳಲ್ಲಿ ಮೀಸಲಾತಿ ರೋಸ್ಟರ್ ಬಿಂದುಗಳನ್ನು (ವಿವಿಧ ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಬಿಂದು) ಪಾಲಿಸದೆ ವಂಚಿಸಲಾಗಿದೆ ಎಂದು ದಾಖಲೆಗಳ ಸಹಿತ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘವು ಖರ್ಗೆ ಅವರ ಗಮನಕ್ಕೆ ತಂದಿತ್ತು. ಅಲ್ಲದೆ, ಮುಖ್ಯಮಂತ್ರಿಗೆ ಅದಾಗಲೇ ಬರೆದಿದ್ದ ಪತ್ರದ ಪ್ರತಿಯನ್ನೂ ನೀಡಿತ್ತು. ಅದಕ್ಕೆ ತಕ್ಷಣ ಸ್ಪಂದಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಖರ್ಗೆ ಅವರು ಕೆಲವು ಸಲಹೆ ನೀಡಿದ್ದಾರೆ.

‘ಪವಿತ್ರ– 1’ ಪ್ರಕರಣದಲ್ಲಿ ‘ಬಡ್ತಿ ಮೀಸಲು ಕಾಯ್ದೆ –2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರಲ್ಲಿ ನೀಡಿದ್ದ ತೀರ್ಪು ಜಾರಿಯಿಂದ ಜ್ಯೇಷ್ಠತೆ ಬದಲಾವಣೆ ಆಗಿತ್ತು. ಪರಿಣಾಮ, ಎಸ್‌ಸಿ, ಎಸ್‌ಟಿ ವರ್ಗದ 3,798 ಅಧಿಕಾರಿ, ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. 65 ಸಾವಿರಕ್ಕೂ ಹೆಚ್ಚು ನೌಕರರ ಜ್ಯೇಷ್ಠತೆಯ ಮೇಲೆ ಪರಿಣಾಮ ಉಂಟಾಗಿತ್ತು. ಹೀಗೆ ಹಿಂಬಡ್ತಿಗೆ ಒಳಗಾಗಿದ್ದ ನೌಕರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ‘ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ–2017’ ಅನ್ನು ರೂಪಿಸಿತ್ತು. ಈ ಕಾಯ್ದೆಯನ್ನು ‘ಪವಿತ್ರ– 2’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಿಂಧುಗೊಳಿಸಿದ್ದರಿಂದ ಹಿಂಬಡ್ತಿಗೆ ಒಳಗಾಗಿದ್ದ ನೌಕರರನ್ನು ಹಿಂಬಡ್ತಿಗೆ ಪೂರ್ವದಲ್ಲಿದ್ದ ಹುದ್ದೆಗೆ ಮರು ನಿಯುಕ್ತಿಗೊಳಿಸಲಾಗಿತ್ತು.

ಅಲ್ಲದೆ, 1978ರ ಏಪ್ರಿಲ್‌ 27ರಿಂದ ಅನ್ವಯವಾಗುವಂತೆ ಈ ಕಾಯ್ದೆಯಲ್ಲಿರುವ ಅಂಶಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ಪುನರ್‌ ಅವಲೋಕಿಸಬೇಕಿತ್ತು.

‘ದಲಿತ ವಿರೋಧಿ ಅಧಿಕಾರಿಗಳು, ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆಯಲ್ಲಿರುವ ಸೌಲಭ್ಯಗಳು ಎಸ್‌ಸಿ, ಎಸ್‌ಟಿ ನೌಕರರಿಗೆ ಸಿಗದಂತೆ ಮಾಡಲು 2019ರ ಜೂನ್‌ 24ರಂದು ಸುತ್ತೋಲೆ ಹೊರಡಿಸಿದ್ದಾರೆ. ಆ ಮೂಲಕ, ಈ ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸಿದ್ದಾರೆ’ ಎಂದು ದೂರಿ ಎಸ್‌ಸಿ, ಎಸ್‌ಟಿ ನೌಕರರ ಸಂಘವು ಜೂನ್‌ 26ರಂದು ಮುಖ್ಯಮಂತ್ರಿಗೆ ಪತ್ರ ಬರೆದಿತ್ತು. 

‘ಶಾಲಾ ಶಿಕ್ಷಣ ಇಲಾಖೆ ಮತ್ತು ಇಂಧನ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್‌) ಸಂಬಂಧಿಸಿದಂತೆ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಆ ಹುದ್ದೆಗಳಲ್ಲಿರುವ ಅಭ್ಯರ್ಥಿಗಳಿಗೆ ಪದೋನ್ನತಿ ನೀಡುವಂತೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಡಿಪಿಎಆರ್‌ ಕೂಡಾ ಅಭಿಪ್ರಾಯ ನೀಡಿದೆ. ಆದರೆ, ಈ ಇಲಾಖೆಯ ಹಿರಿಯ ಅಧಿಕಾರಿಗಳು ಎಸ್‌ಸಿ, ಎಸ್‌ಟಿ ನೌಕರರಿಗೆ ಮುಂಬಡ್ತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದೂ ಸಂಘ ಆರೋಪಿಸಿದೆ.

ಶೀಘ್ರ ವರದಿ ಸಲ್ಲಿಸಲು ಸೂಚನೆ: ವಿವಿಧ ಇಲಾಖೆಗಳಲ್ಲಿ ಬಡ್ತಿ ಮೀಸಲಾತಿಯಲ್ಲಿ ವಂಚನೆ ಆಗಿರುವ ಕುರಿತು ಎಸ್‌ಸಿ, ಎಸ್‌ಟಿ ನೌಕರರ ಸಂಘವು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ 43 ಪುಟಗಳ ದೂರು ಸಲ್ಲಿಸಿತ್ತು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ದೇಶನಾಲಯದ ಕೇಂದ್ರ ಸ್ಥಾನದ ಎಸ್‌ಪಿ ಕೆ. ಧರಣೀ ದೇವಿ ಅವರು ಈ ಬಗ್ಗೆ ವಿಚಾರಣೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಡಿಸಿಆರ್‌ಇ ಎಸ್‌ಪಿ ಅವರಿಗೆ ಜುಲೈ 14ರಂದು ಸೂಚನೆ ನೀಡಿದ್ದಾರೆ.

‘80 ಉಪನ್ಯಾಸಕರಿಗೆ ಸಿಗದ ಪ್ರಾಂಶುಪಾಲ ಹುದ್ದೆ’

‘ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ವೃಂದದಿಂದ ಪ್ರಾಂಶುಪಾಲರ ವೃಂದಕ್ಕೆ ಎಸ್‌ಸಿ 67 ಮತ್ತು ಎಸ್‌ಟಿ ವರ್ಗದ 13 ಸೇರಿ ಒಟ್ಟು 80 ಬ್ಯಾಕ್‌ಲಾಗ್‌ ಅಭ್ಯರ್ಥಿಗಳಿಗೆ ಮುಂಬಡ್ತಿ ನೀಡುವ ಕುರಿತು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವರದಿ ಸಲ್ಲಿಸಿದ್ದರು. ಬ್ಯಾಕ್‌ಲಾಗ್‌ ಅಭ್ಯರ್ಥಿಗಳಿಗೆ ಆದ್ಯತೆಯ ಮೇಲೆ ಮುಂಬಡ್ತಿ ನೀಡುವಂತೆಯೂ ಸೂಚನೆ ನೀಡಿದ್ದರು.

ಅಲ್ಲದೆ, ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿ, ರೋಸ್ಟರ್‌ ನಿರ್ವಹಿಸುವವರೆಗೆ ಸಾಮಾನ್ಯ ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸ್ಪಷ್ಟ ಸೂಚನೆ ನೀಡಿತ್ತು.

ಆದರೆ, ಶಾಲಾ ಶಿಕ್ಷಣ ಇಲಾಖೆಯು ಮೀಸಲಾತಿ ರೋಸ್ಟರ್‌ ನಿರ್ವಹಿಸದೆ ಇತ್ತೀಚೆಗೆ ಮುಂಬಡ್ತಿ ನೀಡಿದೆ. ಇದರಿಂದಾಗಿ 80 ಬ್ಯಾಕ್‌ಲಾಗ್‌ ಉಪನ್ಯಾಸಕರು ಮುಂಬಡ್ತಿಯಿಂದ ವಂಚಿತರಾಗಿದ್ದಾರೆ’ ಎಂದು ಎಸ್‌ಸಿ, ಎಸ್‌ಟಿ ನೌಕರ ಸಂಘವು ದಾಖಲೆಗಳ ಸಹಿತ ಮುಖ್ಯಮಂತ್ರಿ ಹಾಗೂ ಖರ್ಗೆಯವರ ಗಮನಕ್ಕೂ ತಂದಿದೆ.

ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಮೀಸಲಾತಿ ರೋಸ್ಟರ್‌ ನಿಯಮ ಉಲ್ಲಂಘಿಸಿದ್ದರಿಂದ ಎಸ್‌ಸಿ, ಎಸ್‌ಟಿ ವರ್ಗದ ನೌಕರರು ಮುಂಬಡ್ತಿಯಿಂದ ವಂಚಿತ ರಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ
ಡಿ. ಚಂದ್ರಶೇಖರಯ್ಯ, ಅಧ್ಯಕ್ಷರು, ರಾಜ್ಯ ಸರ್ಕಾರಿ ಎಸ್‌ಸಿ,ಎಸ್‌ಟಿ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.