ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಐದು ಸರ್ಕಾರಿ ಶಾಲೆಗಳಿಗೆ ಶೇ 100 ಫಲಿತಾಂಶ!

ಗಡಿ ಭಾಗದ ಶಾಲೆಗಳಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರಜಾವಾಣಿಯಿಂದ ಉಚಿತ ಪತ್ರಿಕೆ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಮೇ 2023, 19:40 IST
Last Updated 8 ಮೇ 2023, 19:40 IST
ಮಂಗಲ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತವಾಗಿ ಪತ್ರಿಕೆ ಹಂಚಿದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ‘ಪ್ರಜಾವಾಣಿ’ಗೆ ವಿದ್ಯಾರ್ಥಿಗಳು, ಶಿಕ್ಷಕರು ಧನ್ಯವಾದ ಅರ್ಪಿಸಿದ ಕ್ಷಣ
ಮಂಗಲ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತವಾಗಿ ಪತ್ರಿಕೆ ಹಂಚಿದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ‘ಪ್ರಜಾವಾಣಿ’ಗೆ ವಿದ್ಯಾರ್ಥಿಗಳು, ಶಿಕ್ಷಕರು ಧನ್ಯವಾದ ಅರ್ಪಿಸಿದ ಕ್ಷಣ   

ಹನೂರು (ಚಾಮರಾಜನಗರ ಜಿಲ್ಲೆ): ಗಡಿ ತಾಲ್ಲೂಕು ಹನೂರಿನ 11 ಸರ್ಕಾರಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳ ಅನುಕೂಲಕ್ಕಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 50 ದಿನಗಳ ಕಾಲ ‘ಪ್ರಜಾವಾಣಿ’ ಪತ್ರಿಕೆಯನ್ನು ಉಚಿತವಾಗಿ ವಿತರಿಸಲಾಗಿದ್ದು, ಈ ಪೈಕಿ ಐದು ಸರ್ಕಾರಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. 

‘ಪ್ರಜಾವಾಣಿ’ಯಲ್ಲಿ ಪ್ರತಿದಿನ ಪ್ರಕಟವಾಗುತ್ತಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಾರ್ಗದರ್ಶಿಯನ್ನು ಗಡಿ ಭಾಗದ ವಿದ್ಯಾರ್ಥಿಗಳೂ ಓದುವಂತಾಗಬೇಕು ಎಂಬ ಉದ್ದೇಶದಿಂದ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಅವರು ಆಸಕ್ತಿ ವಹಿಸಿ ಈ ಯೋಜನೆ ರೂಪಿಸಿದ್ದರು.

ಒಂಬತ್ತು ಸರ್ಕಾರಿ ಶಾಲೆಗಳು ಮತ್ತು ಎರಡು ಅನುದಾನಿತ ಶಾಲೆಗಳಿಗೆ ಪತ್ರಿಕೆ ವಿತರಿಸಲಾಗಿತ್ತು. 

ADVERTISEMENT

ಸರ್ಕಾರಿ ಪ್ರೌಢಶಾಲೆ ಮೀಣ್ಯಂ, ಸರ್ಕಾರಿ ಪ್ರೌಢಶಾಲೆ ಶಾಗ್ಯ, ಸರ್ಕಾರಿ ಪ್ರೌಢಶಾಲೆ ಭೈರನತ್ತ,  ಸರ್ಕಾರಿ ಪ್ರೌಢಶಾಲೆ ಮಂಗಲ ಹಾಗೂ ಸರ್ಕಾರಿ ಪ್ರೌಢಶಾಲೆ ಚೆನ್ನಾಲಿಂಗನಹಳ್ಳಿಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವರಾಜು, ‘ಗಡಿಭಾಗದ ಶಾಲೆಗಳನ್ನು ಗುರುತಿಸಿ ಅಲ್ಲಿನ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉಚಿತವಾಗಿ ಪತ್ರಿಕೆಗಳನ್ನು ಹಂಚಿರುವುದರಿಂದ ಅನುಕೂಲವಾಗಿದೆ. ಈ ಸಾಧನೆಗೆ ಕಾರಣವಾದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ‘ಪ್ರಜಾವಾಣಿ’ಯ ಸಹಕಾರ ಶೈಕ್ಷಣಿಕ ವಲಯದ ಮತ್ತಷ್ಟು ಶಾಲೆಗಳಿಗೆ ಸಿಗುವಂತಾಗಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.