ADVERTISEMENT

ಕೋವಿಡ್‌: ದೃಢ ಪ್ರಮಾಣ ಶೇ 40ರ ಸಮೀಪ

ಪರೀಕ್ಷೆಗೊಳಗಾದ ಪ್ರತಿ 100 ಮಂದಿಯಲ್ಲಿ 40 ಜನರಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 17 ಮೇ 2021, 17:34 IST
Last Updated 17 ಮೇ 2021, 17:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ಪರೀಕ್ಷೆಗಳ ದೃಢಪಡುವ ಪ್ರಮಾಣ(ಪಾಸಿಟಿವಿಟಿ) ದರ ಶೇ 39.70ಕ್ಕೆ ಹೆಚ್ಚಿದೆ. ಅಂದರೆ, ಕೋವಿಡ್‌ ಪರೀಕ್ಷೆಗೆ ಒಳಗಾದ ಪ್ರತಿ 100 ಮಂದಿಯಲ್ಲಿ 40 ಮಂದಿಗೆ ಸೋಂಕು ದೃಢಪಡುತ್ತಿದೆ.

ಸೋಂಕು ಪರೀಕ್ಷೆಗಳು ಕಡಿಮೆಯಾದರೂ, ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿಲ್ಲ. ರಾಜಧಾನಿಗಿಂತಲೂ ಗ್ರಾಮೀಣ ಭಾಗದಲ್ಲಿ ಸೋಂಕು ಪರೀಕ್ಷೆಗಳು ಹೆಚ್ಚು ನಡೆಯುತ್ತಿವೆ. ಹಳ್ಳಿಗಳಲ್ಲಿ ಪರೀಕ್ಷೆಗೊಳಪಟ್ಟ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ.

ಲಕ್ಷಕ್ಕಿಂತಲೂ ಕಡಿಮೆ:ರಾಜ್ಯದಲ್ಲಿ 40 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಎರಡು ಲಕ್ಷಕ್ಕೆ ಆಸುಪಾಸಿಗೆ ತಲುಪಿದ್ದ ಸೋಂಕು ಪರೀಕ್ಷೆಗಳು ಕಳೆದ 10 ದಿನಗಳಿಂದ ಇಳಿಕೆಯಾಗುತ್ತಿವೆ.

ADVERTISEMENT

ಏ.8 ರ ಬಳಿಕ ಮೊದಲ ಬಾರಿ ಸೋಂಕು ಪರೀಕ್ಷೆಗಳು ಒಂದು ಲಕ್ಷಕ್ಕಿಂತಲೂ ಕೆಳಕ್ಕಿಳಿದಿವೆ. ಸೋಮವಾರ 97,236 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಭಾನುವಾರಕ್ಕಿಂತಲೂ 20 ಸಾವಿರ ಪರೀಕ್ಷೆಗಳು ಕಡಿಮೆಯಾಗಿವೆ.

38 ಸಾವಿರ ಮಂದಿಗೆ ಸೋಂಕು:ಸೋಮವಾರ ಹೊಸದಾಗಿ 38,603 ಮಂದಿಗೆ ಸೋಂಕು ತಗುಲಿದ್ದು, 476 ಸೋಂಕಿತರು ಮರಣ ಹೊಂದಿದ್ದಾರೆ. ಭಾನುವಾರ 31 ಸಾವಿರಕ್ಕೆ ತಗ್ಗಿದ್ದ ಹೊಸ ಪ್ರಕರಣಗಳು ಮತ್ತೆ ಏಳು ಸಾವಿರಷ್ಟು ಹೆಚ್ಚಳವಾಗಿವೆ. ಸಾವು 73 ಹೆಚ್ಚಳವಾಗಿದೆ.

ಗುಣಮುಖರ ಸಂಖ್ಯೆಯೂ ಎರಡು ಸಾವಿರಷ್ಟು ತಗ್ಗಿದೆ.34,635 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟಾರೆ ಪ್ರಕರಣಗಳು 22.4 ಲಕ್ಷಕ್ಕೆ ಹೆಚ್ಚಿದ್ದು, ಈ ಪೈಕಿ 16.1 ಲಕ್ಷ ಮಂದಿ ಗುಣಮುಖರಾದ್ದಾರೆ. ಈವರೆಗೆ ಒಟ್ಟಾರೆ 22,313 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಇಂದಿಗೂ 6.03 ಲಕ್ಷ ಮಂದಿ ಚಿಕಿತ್ಸೆ ಆರೈಕೆಯಲ್ಲಿದ್ದಾರೆ.

ರಾಜಧಾನಿಯಲ್ಲಿ ಒಂದೇ ದಿನ 13,338 ಮಂದಿಗೆ ಕೋವಿಡ್‌ ದೃಢಪಟ್ಟಿದ್ದರೆ, 239 ಮಂದಿ ಸಾವಿಗೀಡಾಗಿದ್ದಾರೆ. ಹಾಸನದಲ್ಲಿ 29, ಬಳ್ಳಾರಿಯಲ್ಲಿ 17 ಹಾಗೂ ಕಲಬುರ್ಗಿಯಲ್ಲಿ 15 ಜನ ಮರಣ ಹೊಂದಿದ್ದಾರೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಕೋವಿಡ್‌ ಸಾವು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.