ADVERTISEMENT

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಿಗೆ ಹೊಸ ಸಮೀಕ್ಷೆ: ರಾಜ್ಯ ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
<div class="paragraphs"><p>ಮೀಸಲಾತಿ(ಸಾಂಕೇತಿಕ ಚಿತ್ರ)</p></div>

ಮೀಸಲಾತಿ(ಸಾಂಕೇತಿಕ ಚಿತ್ರ)

   

ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳ ನಿಖರ ದತ್ತಾಂಶ ಸಂಗ್ರಹಿಸಲು ಹೊಸದಾಗಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು 30 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಂಡಿತ್ತು. ಈ ಬೆನ್ನಲ್ಲೇ, ಒಳಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಸರ್ಕಾರ ಆಯೋಗವನ್ನು ರಚಿಸಿತ್ತು. ಆಯೋಗವು ಗುರುವಾರ ಬೆಳಿಗ್ಗೆ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಿ, ಆಯೋಗದ ಮಾಡಿದ್ದ ನಾಲ್ಕು ಶಿಫಾರಸುಗಳಿಗೆ ಅನುಮೋದನೆ ನೀಡಲಾಯಿತು.

ADVERTISEMENT

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು,  ‘ಒಳಮೀಸಲಾತಿ ನೀಡುವುದಕ್ಕಾಗಿ ಪರಿಶಿಷ್ಟ ಜಾತಿಯಲ್ಲಿನ 101 ಉಪಜಾತಿಗಳ ದತ್ತಾಂಶ ಸಂಗ್ರಹಿಸುವುದಕ್ಕೆ ಹೊಸ ಸಮೀಕ್ಷೆ ನಡೆಸಬೇಕು ಎಂದು ಆಯೋಗ ಮಾಡಿರುವ ಶಿಫಾರಸನ್ನು ಒಪ್ಪಿದ್ದೇವೆ’ ಎಂದರು.

ಒಳಮೀಸಲಾತಿ ವರ್ಗೀಕರಣವನ್ನು ತ್ವರಿತವಾಗಿ ಮತ್ತು ವೈಜ್ಞಾನಿಕವಾಗಿ ಕೈಗೊಳ್ಳಲು ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್‌ದಾಸ್‌ ಆಯೋಗಕ್ಕೇ ವಹಿಸಲು ಸಂಪುಟ ಸಭೆ ನಿರ್ಣಯಿಸಿದೆ. ಸಮೀಕ್ಷಾ ಕಾರ್ಯವನ್ನು 60 ದಿನಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಆಯೋಗದ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಕುರಿತು ಹೆಚ್ಚಿನ ವಿವರ ನೀಡಿದ ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಮೀಕ್ಷೆ ಕಾರ್ಯವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಯವರ ಉಸ್ತುವಾರಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಸಮೀಕ್ಷೆ ಕೈಗೊಳ್ಳಲು ಬೇಕಿರುವ ಎಲ್ಲ ಸೌಲಭ್ಯಗಳನ್ನು ಆಯೋಗಕ್ಕೆ ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳ ಸಭೆ ನಡೆಸಲಾಗುವುದು. ಭವಿಷ್ಯದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ದತ್ತಾಂಶಗಳನ್ನು ಕರಾರುವಾಕ್ಕಾಗಿ ಪಡೆಯಲಾಗುವುದು ಎಂದರು.

ಈ ಹಿಂದೆ ನಡೆಸಲಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಎಸ್‌ಸಿ ವರ್ಗಗಳ ಎಲ್ಲ ಉಪಜಾತಿಗಳ ಮಾಹಿತಿ ಇಲ್ಲ. ಈ ದತ್ತಾಂಶ ಇಲ್ಲದಿದ್ದರೆ ಕಾನೂನಿನಡಿ ಮಾನ್ಯತೆ ಸಿಗುವುದಿಲ್ಲ. ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಸಮಸ್ಯೆ ಆಗುತ್ತದೆ. ಸರ್ಕಾರದ ಸಿಬ್ಬಂದಿಯ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 1.30 ಕೋಟಿಯಷ್ಟು ಪರಿಶಿಷ್ಟ ಜಾತಿಯವರು ಇರಬಹುದು ಎಂಬ ಅಂದಾಜಿಸಲಾಗಿದೆ. ಎಲ್ಲರ ಮಾಹಿತಿಯನ್ನೂ ಸಂಗ್ರಹಿಸಲಾಗುವುದು. ಇದಕ್ಕೆ ಅಗತ್ಯವಿರುವ ಹಣವನ್ನು ಸರ್ಕಾರ ನೀಡಲಿದೆ ಎಂದು ಮಹದೇವಪ್ಪ ತಿಳಿಸಿದರು.

ಸಿ.ಎಂ.ಗೆ ವರದಿ ಸಲ್ಲಿಕೆ:

ಸಚಿವ ಸಂಪುಟ ಸಭೆಗೂ ಮೊದಲು ನಾಗಮೋಹನ್‌ದಾಸ್ ಅವರು ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಬಳಿಕ ಮಾತನಾಡಿದ ನಾಗಮೋಹನ್ ದಾಸ್, ‘ಈ ವರದಿ ತಯಾರಿಸಲು ಎರಡು ತಿಂಗಳು ಬೇಕಾಯಿತು. 104  ಪುಟಗಳ ವರದಿಯನ್ನು ಕೊಟ್ಟಿದ್ದೇವೆ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ಕೇಳಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಉದ್ಯೋಗಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು. ಅವರಿಗೆ ಶಾಶ್ವತವಾದ ಪರಿಹಾರ ಕೊಡಬೇಕು.‌ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಯೋಗದ ಶಿಫಾರಸುಗಳೇನು?

*ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು

*ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿವಸಗಳೊಳಗೆ ಹೊಸ ಸಮೀಕ್ಷೆ ನಡೆಸಬಹುದು ಎಂಬುದು ತಜ್ಞರ ಅಭಿಪ್ರಾಯ

*ಹೊಸ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು, ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆ ಮಾಡುವ ಸಿಬ್ಬಂದಿಗೆ ತರಬೇತಿ, ಅಗತ್ಯವಿರುವ ಸಂಪನ್ಮೂಲಗಳ ಕ್ರೋಡೀಕರಣಗಳ ಉಸ್ತುವಾರಿ ನೋಡಿಕೊಳ್ಳಲು ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಬೇಕು

*ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.