
ಚುನಾವಣೆ(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಕುರಿತು ಅಧ್ಯಯನ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಉನ್ನತ ಮಟ್ಟದ ಸಮಿತಿ ರಚಿಸಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು, ಸಮಿತಿಗೆ ಸಂಚಾಲಕರು ಮತ್ತು ಸದಸ್ಯರನ್ನು ನೇಮಕ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರನ್ನು ಸಮಿತಿಯ ಸಂಚಾಲಕರಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಒಳಗೊಂಡು ಒಟ್ಟು ಎಂಟು ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ.
ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಬಿ. ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಎಸ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಈ ಸಮಿತಿಯ ಸದಸ್ಯರು.
‘ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯ, ನಾಯಕತ್ವ ಗುಣ ಉತ್ತೇಜಿಸುವಲ್ಲಿ ವಿದ್ಯಾರ್ಥಿ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕು ಎಂದು ಕಾರ್ಯಕರ್ತರಿಂದ ಬೇಡಿಕೆ ಬಂದಿತ್ತು. ಈ ಬಗ್ಗೆ ಅಧ್ಯಯನ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿ ಸಂಘಗಳ ಚುನಾವಣೆಯ ಕಾರ್ಯಸಾಧ್ಯತೆ ಮತ್ತು ಅಗತ್ಯ, ಅವುಗಳ ಪರಿಣಾಮಗಳು, ಚುನಾವಣೆಯ ಸ್ವರೂಪ, ಮೀಸಲಾತಿ ನೀಡುವ ಬಗ್ಗೆ ಅಧ್ಯಯನ ನಡೆಸಿ 15 ದಿನಗಳ ಒಳಗೆ ವರದಿ ನೀಡಿ ಎಂದು ಅವರು ಸಮಿತಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.