ADVERTISEMENT

ಬೆಳಗಾವಿ ಅಧಿವೇಶನ: ₹6,279 ಕೋಟಿ ಪೂರಕ ಅಂದಾಜು ಪಟ್ಟಿಗೆ ವಿಧಾನಸಭೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 14:36 IST
Last Updated 18 ಡಿಸೆಂಬರ್ 2025, 14:36 IST
   

ಸುವರ್ಣ ವಿಧಾನಸೌಧ(ಬೆಳಗಾವಿ): ಈ ಸಾಲಿನ ಮಾರ್ಚ್ ಅಂತ್ಯದವರೆಗಿನ ಎರಡನೇ ಕಂತಿನ ಬೇಡಿಕೆಗಳ ಮೇಲಿನ ₹6279.80 ಕೋಟಿಗಳ ಪೂರಕ ಅಂದಾಜು ಪಟ್ಟಿಗೆ ವಿಧಾನಸಭೆ ಅನುಮೋದನೆ ನೀಡಿತು.

ಮುಖ್ಯಮಂತ್ರಿಯವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪೂರಕ ಅಂದಾಜು ಪಟ್ಟಿ ಮಂಡಿಸಿದರು.

‘ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಉಂಟಾದ ರೈತರ ಬೆಳೆ ಹಾನಿಗೆ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರ ನೀಡಿದ್ದೇವೆ. ಈ ಹೆಚ್ಚುವರಿ ವೆಚ್ಚ ಭರಿಸಲು ₹1,015 ಕೋಟಿಯನ್ನು ಪೂರಕ ಅಂದಾಜಿನಲ್ಲಿ ಅವಕಾಶ ಮಾಡಿಕೊಡಲಾಗಿದೆ’ ಎಂದು ಅವರು ವಿವರಿಸಿದರು.

ADVERTISEMENT

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇತ್ತೀಚೆಗೆ ಗುಡ್ಡ ಮತ್ತು ಮಣ್ಣು ಕುಸಿತ ಆಗುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯ ವಿಪತ್ತು ಉಪಶಮನ ನಿಧಿಗಾಗಿ ₹372 ಕೋಟಿ ಒದಗಿಸಲಾಗುತ್ತಿದೆ. ಕಬ್ಬು ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ₹50 ನೀಡುತ್ತಿದ್ದು, ಇದಕ್ಕಾಗಿ ₹300 ಕೋಟಿ ಒದಗಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.