ADVERTISEMENT

ಪರಿಷ್ಕೃತ ಪಠ್ಯ ಹಿಂಪಡೆಯಲು ಆಗ್ರಹಿಸಿ ನಾಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 18:34 IST
Last Updated 16 ಜೂನ್ 2022, 18:34 IST
   

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಹಾಗೂ ರೋಹಿತ್‌ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆಯಲು ಆಗ್ರಹಿಸಿ, ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ಯು ಜೂನ್ 18ರಂದು ರಾಜಧಾನಿಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ನಗರದ ರೈಲು ನಿಲ್ದಾಣ ಬಳಿಯಿಂದ ಬೆಳಿಗ್ಗೆ 10ಕ್ಕೆ ರ್‍ಯಾಲಿ ಆರಂಭವಾಗಲಿದೆ. ಬೆಳಿಗ್ಗೆ 11ರ ವೇಳೆಗೆ ಫ್ರೀಡಂಪಾರ್ಕ್ ತಲುಪಲಿದೆ. ಬಳಿಕ ಪ್ರತಿಭಟನಾ ಸಭೆ ನಡೆಯಲಿದೆ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯ ಕವಿಶೈಲದಿಂದ ಹೊರಟಿರುವ ಜ್ಯೋತಿಯನ್ನು ಫ್ರೀಡಂಪಾರ್ಕ್‌ಗೆ ತರಲಾಗುವುದು ಎಂದು ಸಮಿತಿ ಅಧ್ಯಕ್ಷ ಜಿ.ಬಿ.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಪ್ರತಿ ಪಾಠವನ್ನೂ ತಿದ್ದುಪಡಿಗೆ ಒಳಪಡಿಸಿ ಸುಳ್ಳು ಮಾಹಿತಿ ನೀಡಲಾಗಿದೆ. ಕುವೆಂಪು ವಿಶ್ವದ ಆಸ್ತಿ. ಅವರಿಗೆ ಅವಮಾನ ಎಸಗಲಾಗಿದೆ. ಮಹನೀಯರ ಇತಿಹಾಸ ತಿರುಚುವುದು ಸಹ ಅ‍ಪರಾಧ’ ಎಂದು ಪಾಟೀಲ ಹೇಳಿದರು.

ADVERTISEMENT

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ನಮ್ಮ ಹೋರಾಟಕ್ಕೆ ಜೆಡಿಎಸ್‌, ಕಾಂಗ್ರೆಸ್‌, ಎಎಪಿ, ಕನ್ನಡ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿಯಲ್ಲಿರುವ ಪ್ರಜ್ಞಾವಂತರು ರ್‍ಯಾಲಿಯಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾರೆ’ ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಆಡಿಟರ್‌ ನಾಗರಾಜ್‌, ‘ಬುದ್ಧ, ಮಹಾವೀರ, ಬಸವಣ್ಣ, ಕುವೆಂಪು, ವಾಲ್ಮೀಕಿ, ಪೆರಿಯಾರ್‌, ಸಂಗೊಳ್ಳಿ ರಾಯಣ್ಣ, ಕನಕದಾಸರಿಗೆ ಅವಮಾನ ಎಸಗಲಾಗಿದೆ. ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು. ಹಿಂದಿನ ಪಠ್ಯಗಳನ್ನೇ ವಿತರಿಸಬೇಕು. ನಾಡಗೀತೆ, ನಾಡಧ್ವಜವನ್ನು ವಿರೂಪಗೊಳಿಸಿ ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕು. ಅನಗತ್ಯವಾಗಿ ಪಠ್ಯಪರಿಷ್ಕರಣೆ ಮಾಡಿದ್ದು, ಅದರ ನಷ್ಟವನ್ನು ಭರಿಸಬೇಕು’ ಎಂದು ಆಗ್ರಹಿಸಿದರು.

‘ಪಠ್ಯಪುಸ್ತಕದಲ್ಲಿ ನೆಲ, ಜಲ ಹಾಗೂ ಮಹನೀಯರ ಚಿಂತನೆಯ ಬರಹಗಳು ಇರಬೇಕಿತ್ತು. ಆದರೆ, ಪಠ್ಯವನ್ನು ಪಕ್ಷದ ಪ್ರಣಾಳಿಕೆ ಮಾಡಲಾಗಿದೆ. ಆರ್‌ಎಸ್‌ಎಸ್‌ ಸಿದ್ಧಾಂತ ಹೇರುವ ಪ್ರಯತ್ನ ನಡೆಸಲಾಗಿದೆ’ ಎಂದು ಕಾರ್ಯಾಧ್ಯಕ್ಷ ಮಾವಳ್ಳಿ ಶಂಕರ್‌ ದೂರಿದರು.

ಸಾಹಿತಿ ಎಲ್‌.ಎನ್‌. ಮುಕುಂದ ರಾಜ್‌ ಮಾತನಾಡಿ, ‘ಚಕ್ರತೀರ್ಥ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು. ಈ ಹೋರಾಟವು ಜನಾಂದೋಲನವಾಗಿ ರೂಪುಗೊಂಡಿದೆ. ಜೂನ್‌ 18ರ ಬಳಿಕ ಸಚಿವ ನಾಗೇಶ್‌ ಮನೆಯ ಎದುರೂ ಪ್ರತಿಭಟನೆಗೆ ಕೂರುತ್ತೇವೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಪ್ರಭಾ ಎನ್‌. ಬೆಳವಂಗಲ, ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.