ADVERTISEMENT

ಪ್ರವಾಸಿಗರಿಗಾಗಿ ತಲೆ ಎತ್ತಲಿವೆ ತ್ರಿಸ್ಟಾರ್ ಹೋಟೆಲ್‌ಗಳು: ಸಿ.ಪಿ.ಯೋಗೇಶ್ವರ್

ರಾಜ್ಯದ ನಾಲ್ಕು ಪ್ರವಾಸಿ ಸ್ಥಳಗಳಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್    

ಬೆಂಗಳೂರು: ರಾಜ್ಯದ ಪ್ರಮುಖ ನಾಲ್ಕು ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ನಾಲ್ಕು ತ್ರಿಸ್ಟಾರ್‌ ಹೋಟೆಲ್‌ಗಳನ್ನು ನಿರ್ಮಾಣ ಮಾಡಲಿದೆ. ಈ ಕುರಿತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರೈಟ್ಸ್‌ ಸಂಸ್ಥೆಯೊಂದಿಗೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದೆ.

‘ಬೇಲೂರು, ಬಾದಾಮಿ, ವಿಜಯಪುರ ಹಾಗೂ ಹಂಪಿಯಲ್ಲಿ ಈ ಹೋಟೆಲ್‌ಗಳು ತಲೆ ಎತ್ತಲಿವೆ. ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರವಾಸಿಗರ ಸೇವೆಗೆ ಸಮರ್ಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ರೈಟ್ಸ್‌ ಸಂಸ್ಥೆ ಹಾಗೂ ಕೆಎಸ್‌ಟಿಡಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಅವರು ಈ ಮಾಹಿತಿ ನೀಡಿದರು.

ADVERTISEMENT

‘ಈ ಸ್ಥಳಗಳಲ್ಲಿ ಪ್ರವಾಸಿಗರಿಗೆ ತಂಗಲು ಉತ್ತಮ ಹೋಟೆಲ್‌ಗಳು ಇರಲಿಲ್ಲ. ಇಲಾಖೆಯ ವತಿಯಿಂದಲೇ ಇಲ್ಲಿ ಹೋಟೆಲ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದರು.

‘ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗಬಾರದು. ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೋಟೆಲ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು’ ಎಂದು ರೈಟ್ಸ್‌ ಕಂಪನಿಗೆ ಸಚಿವರು ಸೂಚಿಸಿದರು.

ಕಂಪನಿಯ ಹಿರಿಯ ಉಪಪ್ರಧಾನ ವ್ಯವಸ್ಥಾಪಕ ಎಂ.ಜಿ.ಸುದೀಪ್, ವಾಸ್ತುಶಿಲ್ಪಿ ಬಾಲಯ್ಯ, ವ್ಯವಸ್ಥಾಪಕಿ ನೇಹಾ ಜೈನ್ ಹಾಗೂ ಎಂಜಿನಿಯರ್ ಗಿರೀಶ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಶರ್ಮಾ, ಜಂಗಲ್‌ ಲಾಡ್ಜಸ್ ಅಂಡ್‌ ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.